ದಾವಣಗೆರೆ: ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ತೀರಾ ಅಗತ್ಯವಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬೇಕು. ಅನಗತ್ಯವಾಗಿ ಸಿ-ಸೆಕ್ಷನ್ ಮಾಡುವುದನ್ನು ತಡೆದು, ಸಾಮಾನ್ಯ ಹೆರಿಗೆಗಳಿಗೆ ಆದ್ಯತೆ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಪ್ರಮಾಣದಲ್ಲಿ ಸ್ಪಷ್ಟ ಸುಧಾರಣೆ ಕಾಣಿಸಬೇಕು ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳ ಸಿ-ಸೆಕ್ಷನ್ ಪ್ರಮಾಣ ದಿನದಿಂದ ದಿನಕ್ಕೆ ಶೇಕಡ 45 ರಿಂದ 48 ರಷ್ಟು ಹೆಚ್ಚಿದೆ, ಜಗಳೂರು ಮತ್ತು ಹೊನ್ನಾಳಿ ಭಾಗಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಸಿ-ಸೆಕ್ಷನ್ ಹೆರಿಗೆಗಳು ಹಗಲಿನಲ್ಲಿಯೇ ನಡೆದಿದ್ದು, ರಾತ್ರಿ ವೇಳೆಯಲ್ಲಿ ಈ ಪ್ರಮಾಣ ಕೇವಲ ಶೇಕಡ 0 ರಿಂದ 5 ರಷ್ಟಿದೆ. ವಿಶೇಷವಾಗಿ, ರಾತ್ರಿ ವೇಳೆಗಿಂತ ಹೆಚ್ಚಾಗಿ ಹಗಲಿನಲ್ಲಿಯೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದೆಕೇ? ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
“ಸೂರ್ಯ ಉದಯವಾದಾಗಷ್ಟೇ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತವಾ? ಸೂರ್ಯ ಮುಳುಗಿದ ಮೇಲೆ ಹೆರಿಗೆ ಶಸ್ತ್ರಚಿಕಿತ್ಸೆಗಳು ನಿಂತು ಹೋಗುತ್ತವಾ? ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಕೇವಲ ಹಗಲಿನಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ, ರಾತ್ರಿ ವೇಳೆ ಕರ್ತವ್ಯದಿಂದ ಜಾರಿಕೊಳ್ಳುವ ಮನೋಭಾವ ವೈದ್ಯರಲ್ಲಿದೆಯೇ?” ಎಂದರು.
ವಿಶೇಷವಾಗಿ ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳ ಆಸ್ಪತ್ರೆಗಳಲ್ಲಿ ಸಂಜೆ 4ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಹೆಚ್ಚಿನ ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ, ವೈದ್ಯರು ರಾತ್ರಿ ವೇಳೆ ಕರ್ತವ್ಯದಲ್ಲಿರಲು ಇಷ್ಟಪಡದೆ, ಅಥವಾ ಮನೆಗೆ ಬೇಗ ಹಿಂತಿರುಗುವ ಉದ್ದೇಶದಿಂದ ಸಮಯಕ್ಕಿಂತ ಮುಂಚಿತವಾಗಿಯೇ ಹೆರಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.
ಸಂಜೆ 4 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ನಡೆದಿರುವ ಎಲ್ಲಾ ಸಿ-ಸೆಕ್ಷನ್‌ಗಳನ್ನು ವೈದ್ಯಕೀಯ ಆಡಿಟ್‌ಗೆ ಒಳಪಡಿಸಿ. ಈ ಹೆರಿಗೆಗಳು ವೈದ್ಯಕೀಯವಾಗಿ ನಿಜಕ್ಕೂ ಅಗತ್ಯವಾಗಿದ್ದವೇ ಅಥವಾ ಸಮಯ ಉಳಿಸಲು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿನ 4 ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಶೇ. 100 ರಷ್ಟು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುತ್ತಿದ್ದಾರೆ, ಕೆಲವು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಶೇಕಡಾ 70 ರಿಂದ 100 ರಷ್ಟು ಸಿ-ಸೆಕ್ಷನ್ ಹೆರಿಗೆಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸಿ, ಎಚ್ಚರಿಕೆ ನೀಡಲಾಗಿದೆ ಎಂದರು.
ಗೃಹ ಆರೋಗ್ಯ ಯೋಜನೆ ಮತ್ತು ಔಷಧಗಳ ಪೂರೈಕೆ:
ಗೃಹ ಆರೋಗ್ಯ ಯೋಜನೆಯಡಿ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧ ದಾಸ್ತಾನು ಇಟ್ಟುಕೊಳ್ಳಬಾರದು, ರೋಗಿಗಳ ಮನೆಗೆ ನೇರವಾಗಿ ಹಾಗೂ ನಿಖರವಾಗಿ ಔಷಧಗಳು ತಲುಪುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿ, ಔಷಧಗಳನ್ನು ತಾಲೂಕು ಆಸ್ಪತ್ರೆಗಳಿಗೆ ಮರುಹಂಚಿಕೆ ಮಾಡಲು ತಿಳಿಸಿದರು.
ವಿದ್ಯಾರ್ಥಿ ಆರೋಗ್ಯ ಯೋಜನೆ:
ಜಿಲ್ಲೆಯ ಸುಮಾರು 20,000 ಹಾಸ್ಟೆಲ್ ವಿದ್ಯಾರ್ಥಿಗಳ (ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿನಿಯರ) ಆರೋಗ್ಯ ರಕ್ಷಣೆಗೆ ‘ವಿದ್ಯಾರ್ಥಿ ಆರೋಗ್ಯ ಕಾರ್ಡ್’ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಹಾಸ್ಟೆಲ್‌ಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಟ್ಯಾಗ್ ಮಾಡಲಾಗಿದ್ದು, ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರೊಂದಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ತಡೆ ಹಾಗೂ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ತಿಳಿಸಿದರು.
ಅನಿಮಿಯಾ (ರಕ್ತಹೀನತೆ) ನಿರ್ಮೂಲನೆಗೆ ಒತ್ತು:
ಹರಿಹರ ಸೇರಿದಂತೆ ವಿವಿಧ ಭಾಗಗಳಲ್ಲಿ ರಕ್ತಹೀನತೆ ಪ್ರಕರಣಗಳನ್ನು ಗುರುತಿಸಲಾಗಿದ್ದು, ಗಂಭೀರ ಸ್ವರೂಪದ ಅನಿಮಿಯಾ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಮಧ್ಯಮ ಸ್ವರೂಪದ ಅನಿಮಿಯಾ ಪೀಡಿತರಿಗೂ ಸೂಕ್ತ ಜಾಗೃತಿ ಮತ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು, ಆರೋಗ್ಯ ಸೇವೆಗಳನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಕರಿಗೂ ಪರಿಣಾಮಕಾರಿಯಾಗಿ ತಲುಪಿಸಲು ಒಗ್ಗಟ್ಟಿನಿಂದ ಶ್ರಮಿಸುವಂತೆ ತಿಳಿಸಿದರು.
ಅರ್ಹತೆ ಇಲ್ಲದ ನಾಟಿ ವೈದ್ಯರು ಯಾವುದೇ ಆಂಟಿ-ವೆನಮ್ ನೀಡದೆ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಕಾನೂನುಬಾಹಿರ ಕ್ಲಿನಿಕ್ ಗಳನ್ನು ಕೇವಲ ಬಂದ್ ಮಾಡುವುದು ಸಾಲದು, ಅವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ದಡಿ ಯಾವುದೇ ಮಗುವು ಚುಚ್ಚುಮದ್ದಿನಿಂದ ಹೊರಗುಳಿಯದಂತೆ ಕ್ರಮವಹಿಸುವಂತೆ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳನ್ನು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು, ಅವಶ್ಯ ಹೆಚ್ಚು ಇರುವ ಔಷಧಿಗಳನ್ನು ಹೆಚ್ಚು ದಾಸ್ತಾನು ಇರುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಹಳೆ ಕಟ್ಟಡವನ್ನು ದುರಸ್ತಿ ಮಾಡುವ ಬದಲು ಮುಂದಿನ ಐದಾರು ದಶಕಗಳ ಕಾಲ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಶಾಶ್ವತ ಹಾಗೂ ಗುಣಮಟ್ಟದ ಆಸ್ಪತ್ರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಸ್ತುತ 400 ಹಾಸಿಗೆಗಳ ಹೊಸ ಕಟ್ಟಡವನ್ನು ನಿರ್ಮಿಸಲು ಕ್ರಮವಹಿಸಿ, ಎಕ್ಸ್-ರೇ, ಲ್ಯಾಬೊರೇಟರಿ ಹಾಗೂ ಇತರೆ ತುರ್ತು ಸೇವೆಗಳು ಸಾರ್ವಜನಿಕರಿಗೆ ಯಾವುದೇ ಅಡಚಣೆಯಿಲ್ಲದೆ ಸಿಗುವಂತೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿದರು.
ಬೆಂಗಳೂರು ವಿಭಾಗದ ಸಹ ನಿರ್ದೇಶಕ ಡಾ.ರವಿ ಆರ್, ಉಪ ನಿರ್ದೇಶಕ ಡಾ.ಚಂದ್ರಶೇಖರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಧು ಕೆ.ಎಸ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ದೇವೆಂದ್ರಪ್ಪ, ಆರ್.ಸಿ.ಹೆಚ್ ಅಧಿಕಾರಿ ಡಾ.ರೇಣುಕಾರಾಧ್ಯ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

