HomeKarnatakaರಾಜ್ಯದಲ್ಲಿ ಮುಂದಿನ 6 ತಿಂಗಳು ಉದ್ಯೋಗ ಪರ್ವ: 36 ಸಾವಿರ ಹುದ್ದೆ ಭರ್ತಿ: ಅಕ್ರಮವೆಸಗಿದವರಿಗೆ ಕಠಿಣ...

ರಾಜ್ಯದಲ್ಲಿ ಮುಂದಿನ 6 ತಿಂಗಳು ಉದ್ಯೋಗ ಪರ್ವ: 36 ಸಾವಿರ ಹುದ್ದೆ ಭರ್ತಿ: ಅಕ್ರಮವೆಸಗಿದವರಿಗೆ ಕಠಿಣ ಶಿಕ್ಷೆ, 10 ಲಕ್ಷ ರೂ. ದಂಡ: ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಬರುವ 6 ತಿಂಗಳು ಅಂದಾಜು 36000 ಹುದ್ದೆಯನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಂಪೂರ್ಣ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ನಡೆಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏನಾದರೂ ಅಕ್ರಮ ಎಸಗಿದರೆ ಅವರಿಗೆ 5 ವರ್ಷ ಜೈಲು ಮತ್ತು 10 ಲಕ್ಷ ದಂಡ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಅವರು ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ತಡೆಯಲು, ಎಲ್ಲಾ ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಮತ್ತು ಜಾಮರ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು, ಪರೀಕ್ಷಾ ಕೇಂದ್ರಗಳ ಆಯ್ಕೆ, ಭದ್ರತಾ ತಪಾಸಣೆ ಹಾಗೂ ಪ್ರಶ್ನೆಪತ್ರಿಕೆಗಳ ವಿತರಣೆ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರಂತೆ ಕ್ರಮವಹಿಸಬೇಕು. ಪರೀಕ್ಷಾ ಕೇಂದ್ರದ ಒಳಗಿನ ಸಿಬ್ಬಂದಿ ಸೇರಿದಂತೆ ಯಾರಿಗೂ ಮೊಬೈಲ್ ಫೋನ್ ಬಳಸಲು ಅವಕಾಶವಿರುವುದಿಲ್ಲ. ಎಲ್ಲರ ಮೊಬೈಲ್‌ ಗಳನ್ನು ಪರೀಕ್ಷೆ ಆರಂಭಕ್ಕೂ ಮುನ್ನವೇ ಲಾಕರ್‌ ನಲ್ಲಿ ಇಡುವುದು ಕಡ್ಡಾಯ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆ ಅಥವಾ ಪರೀಕ್ಷಾ ಅಕ್ರಮದ ಕುರಿತು ವದಂತಿ ಹಬ್ಬಿಸುವವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲು ಕ್ರಮವಹಿಸಬೇಕು ಎಂದರು.

ರಾಜ್ಯದಲ್ಲಿ ನೌಕರಿ ಮತ್ತು ವಿವಿಧ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರ ಅತ್ಯಂತ ಗಂಭೀರವಾದ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸೂಚನೆ ನೀಡಿದರು.

ಆಗಸ್ಟ್ 2 ರಿಂದ ಅಕ್ಟೋಬರ್ ಅವಧಿಯಲ್ಲಿ 36000 ಹುದ್ದೆಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಒಟ್ಟಾರೆಯಾಗಿ ಸುಮಾರು 35 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗಳನ್ನು ಬರೆಯಲಿದ್ದಾರೆ. ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು(ಅಕ್ರಮ ಮತ್ತು ಭ್ರಷ್ಟಾಚಾರ ತಡೆ) ಕಾಯ್ದೆ 2023’ರ ಅಡಿಯಲ್ಲಿ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂಪಾಯಿ ದಂಡ ಹಾಗೂ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಪರೀಕ್ಷೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರತಿಯೊಬ್ಬ ಭಾಗೀದಾರರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಅಭ್ಯರ್ಥಿಗಳಿಗೆ ಪ್ರವೇಶ ಪತ್ರದಲ್ಲಿ ಡ್ರೆಸ್‌ ಕೋಡ್‌ ಮತ್ತು ನಿಷೇದಿತ ವಸ್ತುಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿಟ್ಟು, ಸಾರ್ವಜನಿಕರಲ್ಲಿ ಮತ್ತು ಅಭ್ಯರ್ಥಿಗಳಲ್ಲಿ ಸಂಪೂರ್ಣ ನಂಬಿಕೆ ಮೂಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿ ಜಿಲ್ಲಾಧಿಕಾರಿಗಳು ಪೊಲೀಸ್‌ ವರಿಷ್ಠಾಧಿಕಾರಿಗಳು ಕಾರ್ಯ ನಿರ್ವಹಿಸುತವಂತೆ ಸೂಚನೆ ನೀಡಿದರು.

ಕೋಚಿಂಗ್‌ ಸೆಂಟರ್‌ ಗಳು ಮತ್ತು ಅದರ ಉಪನ್ಯಾಸಕರುಗಳ ಮೇಲೆ ನಿಗಾ ವಹಿಸಬೇಕು. ಅಗತ್ಯವಿದ್ದಲ್ಲಿ ಕೋಚಿಂಗ್‌ ಸೆಂಟರ್‌ ಗಳನ್ನು ಭೇಟಿ ಮಾಡಿ ಎಂದು ಸೂಚಿಸಿದರು.

ಗೃಹಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಹಾಗೂ ಇತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular