ಕಲಬುರಗಿ: ಗುತ್ತಿಗೆ ಪಡೆದ ಕೆಲಸದ ಹಣ ಕೇಳಿದ್ದಕ್ಕೆ ಕಾಂಗ್ರೆಸ್ ಮುಖಂಡರೊಬ್ಬರು ಬೆದರಿಕೆ ಹಾಕಿದ್ದಕ್ಕೆ ಮನನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖದೀರ್ ಪಾಷಾ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಹಾಗೂ ಅವರ ಅಳಿಯ ಅಮಿತ್ ರಾಠೋಡ್ ವಿರುದ್ಧ ದೂರು ದಾಖಲಾಗಿದೆ.
ಸೇಡಂನ ಸಿಮೆಂಟ್ ಕಾರ್ಖಾನೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅರವಿಂದ್ ಚವ್ಹಾಣ್ ಅದರ ಕೆಲಸಕ್ಕೆ ಖದೀರ್ ಪಾಷಾ ನನ್ನ ಕೂಲಿಗಾಗಿ ನೇಮಿಸಿಕೊಂಡಿದ್ದರು. ಬಳಿಕ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಕೇಳಿದಾಗ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕಿರುಕುಳದಿಂದ ಮನನೊಂದು ಖದೀರ್ ಪಾಷಾ ರಟಕಲ್ ಗ್ರಾಮದ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೃತನ ಪತ್ನಿ ಅನೀಸಾ ಬೇಗಂ ನೀಡಿದ ದೂರಿನ ಮೇರೆಗೆ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

