HomeKarnatakaಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿಲ್ಲ, ಫೇಸ್ಬುಕ್- ವಾಟ್ಸಾಪ್ ನಿಯಂತ್ರಣ ಸಚಿವರಾಗಿದ್ದಾರೆ: ಶಾಸಕ ಸುನಿಲ್ ಕುಮಾರ್ ಕಿಡಿ

ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿಲ್ಲ, ಫೇಸ್ಬುಕ್- ವಾಟ್ಸಾಪ್ ನಿಯಂತ್ರಣ ಸಚಿವರಾಗಿದ್ದಾರೆ: ಶಾಸಕ ಸುನಿಲ್ ಕುಮಾರ್ ಕಿಡಿ

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ವಿರುದ್ಧ ಯಾರೂ ಕೂಡ ಮಾತನಾಡಬಾರದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಉಳಿದಿಲ್ಲ. ವಾಟ್ಸಾಪ್ ಮತ್ತು ಫೇಸ್ಬುಕ್ ನಿಯಂತ್ರಣ ಸಚಿವರಾಗಿ ಬದಲಾಗಿದ್ದಾರೆ. ಇದು ರಾಜ್ಯದ ದುರಂತ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್, ದರೋಡೆ, ಕೊಲೆ, ಕ್ರಿಮಿನಲ್ ಕೇಸ್ ಬಗ್ಗೆ ತಲೆಕೆಡಿಸಿಕೊಳ್ಳದ ಗೃಹ ಇಲಾಖೆ ಕೇವಲ ಬಿಜೆಪಿಯವರು, ಹಿಂದೂ ಸಂಘಟನೆಗಳ ಭಾಷಣ ನೋಡುತ್ತಿದೆ ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಗೃಹ ಇಲಾಖೆ ಜೀವಂತವಾಗಿದೆಯೋ ಇಲ್ಲವೋ ಎಂಬ ದೊಡ್ಡ ಅನುಮಾನ ವ್ಯಕ್ತವಾಗುತ್ತಿದೆ. ಪ್ರಸ್ತುತ ಗೃಹ ಇಲಾಖೆಯು ಕೇವಲ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳನ್ನು ನಿಯಂತ್ರಿಸುವುದಕ್ಕೆ ಹಾಗೂ ಬಿಜೆಪಿ ನಾಯಕರ ಭಾಷಣಗಳನ್ನು ಹುಡುಕಿ ನೋಟಿಸ್ ನೀಡುವುದಕ್ಕಷ್ಟೇ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ದಂಧೆ, ಸಾಲು ಸಾಲು ಕೊಲೆ ಮತ್ತು ಸುಲಿಗೆಗಳ ಬಗ್ಗೆ ಗೃಹ ಇಲಾಖೆಗೆ ಯಾವುದೇ ತಲೆಬಿಸಿಯಿಲ್ಲ. ಬದಲಿಗೆ, ಕೇವಲ ವಿಪಕ್ಷ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾತನಾಡುತ್ತಾರೆ, ಭಾಷಣಗಳಲ್ಲಿ ಏನು ಹೇಳುತ್ತಾರೆ ಎಂಬುದನ್ನು ಹುಡುಕುವುದನ್ನೇ ಇಲಾಖೆ ತನ್ನ ಮುಖ್ಯ ಕೆಲಸವನ್ನಾಗಿಸಿಕೊಂಡಿದೆ. ಗೃಹ ಇಲಾಖೆ ಈ ರೀತಿ ಒಂದು ನಿರ್ಧಿಷ್ಟ ಪಕ್ಷವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದರು.

ಇತ್ತೀಚೆಗೆ ಬಿಜೆಪಿ ನಾಯಕರಾದ ಸಿ.ಟಿ.ರವಿ ಹಾಗೂ ಯಶ್‌ಪಾಲ್ ಸುವರ್ಣ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ, ಬಿಜೆಪಿ ನಾಯಕರು ಹಿಂದೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಗಳಿಗೆ ಹೆದರಿದವರಲ್ಲ. ಇನ್ನು ಕಾಂಗ್ರೆಸ್ ಸರ್ಕಾರದ ಈ ಬೆದರಿಕೆ ನೋಟಿಸ್ ಹಾಗೂ ಎಫ್‌ಐಆರ್‌ ಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನೋಟಿಸ್ ನೀಡುವ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸರ್ಕಾರವನ್ನು ವಿರೋಧಿಸುವ ಬಿಜೆಪಿ ನಾಯಕರು, ಶಾಸಕರು ಹಾಗೂ ಹಿಂದುತ್ವವಾದಿಗಳನ್ನು ಸಾಲಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಬಿಡದಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ರೈತರ ಮೇಲೆಯೇ ಕೊಲೆಯತ್ನ ಕೇಸ್ ಹಾಕಲಾಗಿದೆ. ಮತ್ತೊಂದೆಡೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಲಾಗುತ್ತಿದೆ ಎಂದು ಆಪಾದಿಸಿದರು.

ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ವಿರೋಧ ಪಕ್ಷವಾದ ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದಲ್ಲಿ ಸಚಿವರುಗಳು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ರೈತರಿಗೆ ಅನಾಥ ಪ್ರಜ್ಞೆ ಕಾಡುತ್ತಿದ್ದು, ಅವರಿಗೆ ಧೈರ್ಯ ತುಂಬಲು ಹಾಗೂ ಅವರು ವಿಚಲಿತರಾಗದಂತೆ ಬೆಂಬಲವಾಗಿ ನಿಲ್ಲಲು ಬಿಜೆಪಿ 6 ತಂಡಗಳ ಮೂಲಕ ಜಂಟಿ `ಬರ ಅಧ್ಯಯನ ಪ್ರವಾಸ’ ಕೈಗೊಂಡಿದೆ ಎಂದು ತಿಳಿಸಿದರು.

ರಾಜ್ಯದ ಜನತೆ ಇನ್ನು ಒಂದೂವರೆ ವರ್ಷಗಳ ಕಾಲ ಈ ದುರಾಡಳಿತವನ್ನು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಆದರೆ ಕಾಂಗ್ರೆಸ್ ಸರ್ಕಾರದ ಈ ತಾರತಮ್ಯ, ದ್ವೇಷದ ರಾಜಕಾರಣ ಮತ್ತು ಬೆದರಿಕೆ ತಂತ್ರಗಳಿಗೆ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular