ಹೊಸಪೇಟೆ: ರಾಜ್ಯದ ರೈತರು ಬರಗಾಲದಿಂದ ಕಂಗೆಟ್ಟು ಬದುಕಿನ ಸಂಕಷ್ಟ ಎದುರಿಸುತ್ತಿದ್ದರೆ, ಸರ್ಕಾರ ಮಾತ್ರ ನಿರ್ಲಕ್ಷ್ಯದ ಧೋರಣೆ ತಾಳಿರುವುದು ಅತ್ಯಂತ ವಿಷಾದನೀಯ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಬರಪೀಡಿತ ಜಿಲ್ಲೆಗಳ ಜನರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ದೆಹಲಿಯಲ್ಲಿ ಕಾಲ ಕಳೆಯುವುದನ್ನು ಬಿಟ್ಟು, ಕೂಡಲೇ ರಾಜ್ಯಕ್ಕೆ ಮರಳಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅನ್ನದಾತರ ನೋವಿಗೆ ಸ್ಪಂದಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗದಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.
ಬರ ಪರಿಸ್ಥಿತಿ ಪರಿಶೀಲನೆ ಪ್ರವಾಸದ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ತಾಂಡಾ ಗ್ರಾಮಕ್ಕೆ ಭೇಟಿ ನೀಡಿ, ಜೋಳ ಬೆಳೆ ಬೆಳೆದ ರೈತರ ಜಮೀನುಗಳಿಗೆ ತೆರಳಿ ಮಳೆಯ ಕೊರತೆ ಹಾಗೂ ನೀರಿನ ಅಭಾವದಿಂದ ಉಂಟಾಗಿರುವ ಬೆಳೆ ಹಾನಿಯನ್ನು ಪರಿಶೀಲಿಸಿ, ರೈತರ ಅಹವಾಲುಗಳನ್ನು ಆಲಿಸಿದ ಅವರು, ಸಾಕಷ್ಟು ಮಳೆಯಾಗದ ಕಾರಣ ಜೋಳ ಬೆಳೆ ಸಮರ್ಪಕವಾಗಿ ಬೆಳೆಯದೇ ಹೊಲಗಳಲ್ಲೇ ಒಣಗಿ ನಿಂತಿದೆ. ಅಪಾರ ಶ್ರಮ, ಸಮಯ ಮತ್ತು ಸಾಲದ ಹಣವನ್ನು ಹೂಡಿ ಕೃಷಿ ಮಾಡಿದ ರೈತರು ಇಂದು ಬೆಳೆ ನಷ್ಟದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಇದೀಗ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.
ಇಂತಹ ಸಂಕಷ್ಟದ ವೇಳೆಯಲ್ಲಿ ರೈತರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಇನ್ನೂ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವುದು ಅತ್ಯಂತ ವಿಷಾದನೀಯ. ಬೆಳೆ ಹಾನಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕಾದ ಜವಾಬ್ದಾರಿಯಿಂದ ಸರ್ಕಾರ ದೂರ ಉಳಿದಿರುವುದು ರೈತರ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯ ಸರ್ಕಾರ ಕೂಡಲೇ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ, ರೈತರಿಗೆ ವಿಳಂಬವಿಲ್ಲದೆ ಸೂಕ್ತ ಪರಿಹಾರ, ಬೆಳೆ ವಿಮೆ ಸೌಲಭ್ಯ ಹಾಗೂ ಅಗತ್ಯ ನೆರವು ಒದಗಿಸಬೇಕು. ಅನ್ನದಾತನ ಶ್ರಮಕ್ಕೆ ನ್ಯಾಯ ಒದಗಿಸಿ, ರೈತರ ಬದುಕಿಗೆ ಆಸರೆಯಾಗುವ ಕೆಲಸವನ್ನು ಸರ್ಕಾರ ತನ್ನ ಮೊದಲ ಆದ್ಯತೆಯಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

