ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರಗಳ ಆದೇಶದ ಬೆನ್ನಲ್ಲೇ ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿವೆ.
ಕಾವೇರಿ ನದಿ ನೀರು ವಿಚಾರದಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ( CWMA) ಪ್ರತಿ ದಿನ 3,500 ಕ್ಯೂಸೆಕ್ ನಂತೆ ತಮಿಳುನಾಡಿಗೆ 15 ದಿನಗಲ ಕಾಲ 4 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಿವೆ. ಕರ್ನಾಟಕದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇರುವ ಹೊತ್ತಲ್ಲಿ ಇಂತಹ ಆದೇಶ ನೀಡಿರುವುದಕ್ಕೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಹೆಚ್ಚಾಗುತ್ತಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದೆ.
ಸಭೆಯಲ್ಲಿ ಮಾತನಾಡಿದ ಜಯಮಾಲಾ, ಕಾವೆರಿ ನದಿ ನೀರು ವಿಚಾರವಾಗಿ ರಾಜ್ಯದ ರೈತರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ನೆಲ ಜಲ ಭಾಷೆ ಈ ಮೂರಕ್ಕೂ ಧಕ್ಕೆ ಆಗುತ್ತೆ ಅಂದಾಗ ಫಿಲಂ ಚೇಂಬರ್ ಯಾವತ್ತೂ ನಿಂತಿದ್ದೀವಿ. ಅವತ್ತು ಮಹಾದಾಯಿ, ಇವತ್ತು ಕಾವೇರಿ. 4 tmc ನೀರು ಬಿಡಬೇಕು ಅಂತ ಕೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ಇದ್ದೀವಿ ಅಂತ ಹೇಳೋಕೆ ಇಚ್ಚಿಸುತ್ತೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಸ್ಪಷ್ಟಪಡಿಸಿದರು.
ಈ ವೇಳೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ಕರ್ನಾಟಕದಲ್ಲಿ ಏನು ಪರಿಸ್ಥಿತಿ ಇದೆ ಅನ್ನೋದನ್ನ ಕಾವೇರಿ ನಿಯಂತ್ರಣ ಮಂಡಳಿ ಪರಿಶೀಲಿಸಬೇಕಿದೆ. ಕಳೆದ ಭಾರಿ ನೀರು ಇತ್ತು. ಹಾಗಾಗಿ ಬಿಟ್ಟಿದ್ದೀವಿ.ಈ ಗ ನಮ್ಮ ಬಳಿ ನೀರಿಲ್ಲ ಇಂತಹ ಸಂದರ್ಭದಲ್ಲಿ ನೀರು ಬಿಡುವುದು ಸಾಧ್ಯವಿಲ್ಲ ಎಂದರು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಭಾಷೆ , ನೆಲ, ಜಲ ಅಂತ ಬಂದ್ರೆ ಒಂದೇ ಧ್ವನಿ. ನಾಡು ನುಡಿ ಜಲ ಭಾಷೆ ವಿಚಾರ ಬಂದಾಗ ಎಂತ ಸಂದರ್ಭ ಬಂದ್ರೂ ಒಗ್ಗಟ್ಟಾಗಿ ಇರುತ್ತೇವೆ. ಏನೇ ಬಂದ್ರೂ ಒಗ್ಗಟ್ಟಾಗಿಬಲ ಇರ್ತೀವಿ ಎಂದು ಹೇಳಿದರು.

