ಬೆಂಗಳೂರು: ವಾಹನಗಳ ಟೈರ್‌ಗಳಿಗೆ ಉದ್ದೇಶಪೂರ್ವಕವಾಗಿ ಪಂಚರ್ ಆಗುವಂತೆ ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಇಬ್ಬರು ಪಂಚರ್ ಅಂಗಡಿ ಮಾಲೀಕರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಜಾಲಹಳ್ಳಿಯ ಎಂಇಎಸ್ (MES) ರಿಂಗ್ ರಸ್ತೆ ಬದಿಯಲ್ಲಿ ಪಂಚರ್ ಅಂಗಡಿ ನಡೆಸುತ್ತಿದ್ದರು. ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬೈಕ್‌ನಲ್ಲಿ ಬಂದು ರಸ್ತೆಯುದ್ದಕ್ಕೂ ಮೊಳೆಗಳನ್ನು ಚೆಲ್ಲಿ ಹೋಗುತ್ತಿದ್ದರು. ಬಳಿಕ ಟೈರ್ ಪಂಚರ್ ಆದ ವಾಹನ ಸವಾರರಿಗೆ ನೆರವು ನೀಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ
ಎಂಇಎಸ್ ರಿಂಗ್ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ಪಂಚರ್ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ರಸ್ತೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಪತ್ತೆಯಾಗಿದ್ದವು.
ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೆಂಪು ಬಣ್ಣದ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ರಸ್ತೆಗೆ ಮೊಳೆಗಳನ್ನು ಚೆಲ್ಲುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿದ್ದವು. ಈ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ತನಿಖೆ ಮುಂದುವರಿಕೆ
ಬಂಧಿತರಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಪಂಚರ್ ದಂಧೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ. ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

