ನವದೆಹಲಿ- ಲಿಫ್ಟ್ ಅಪಘಾತ ಸಂಭವಿಸಿದಾಗ ಅದರ ಜವಾಬ್ದಾರಿಯನ್ನು ಗ್ರಾಹಕರು ಅಥವಾ ಬಲಿಪಶುಗಳೇ ನಿರ್ಧರಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ತಯಾರಕರು, ನಿರ್ವಹಣಾ ಸಂಸ್ಥೆಗಳು ಮತ್ತು ಕಟ್ಟಡ ಮಾಲೀಕರು ಜಂಟಿಯಾಗಿ ಜವಾಬ್ದಾರರಾಗುತ್ತಾರೆ ಎಂದು ಐತಿಹಾಸಿಕ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು ಈ ತೀರ್ಪು ನೀಡಿದ್ದು, ಓಟಿಸ್ ಎಲಿವೇಟರ್ ಕಂಪನಿ (ಇಂಡಿಯಾ) ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ದುರಂತಕ್ಕೆ ನಾಂದಿ ಹಾಡಿದ ಘಟನೆ
ಈ ಮಹತ್ವದ ತೀರ್ಪಿಗೆ ಆಧಾರವಾಗಿರುವುದು ಮಾರ್ಚ್ 20, 2003 ರಂದು ನವದೆಹಲಿಯ R&AW ಪ್ರಧಾನ ಕಚೇರಿಯಲ್ಲಿ ನಡೆದ ದೌರ್ಭಾಗ್ಯಕರ ಘಟನೆ. ಮಾಜಿ ರಾಜತಾಂತ್ರಿಕ ವಿಪಿನ್ ಹಂಡಾ ಅವರು ಲಿಫ್ಟ್ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಆರನೇ ಮತ್ತು ಏಳನೇ ಮಹಡಿಗಳ ನಡುವೆ ಲಿಫ್ಟ್ ಸಿಲುಕಿಕೊಂಡಾಗ, ರಕ್ಷಣಾ ಕಾರ್ಯಾಚರಣೆಯ ವೇಳೆ ಲಿಫ್ಟ್ ಹಠಾತ್ ಜಾರಿಬಿದ್ದು ಈ ದುರಂತ ಸಂಭವಿಸಿತ್ತು.
ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವು (NCDRC) ಈ ಹಿಂದೆ ವಿಪಿನ್ ಹಂಡಾ ಅವರ ಕುಟುಂಬಕ್ಕೆ 3.01 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿರುವುದಲ್ಲದೆ, 2003ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9 ಬಡ್ಡಿ ಹಾಗೂ 90 ದಿನಗಳಲ್ಲಿ ಪಾವತಿಸದಿದ್ದರೆ ಶೇ. 12 ರಷ್ಟು ಬಡ್ಡಿ ವಿಧಿಸುವ ಆದೇಶವನ್ನು ಅನುಮೋದಿಸಿದೆ
ಹೊಣೆಗಾರಿಕೆಯ ನಿಖರ ವಿಂಗಡಣೆ
ಹೊಣೆಗಾರಿಕೆಯ ನಿಖರ ವಿಂಗಡಣೆ
ಪ್ರಕರಣದ ತನಿಖೆ ಮತ್ತು ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯವು ಜವಾಬ್ದಾರಿಯನ್ನು ವಿಂಗಡಿಸಿದೆ.
ಲಿಫ್ಟ್ ತಯಾರಕ ಕಂಪನಿ (Otis)-: ಶೇ. 70 ರಷ್ಟು ಹೊಣೆ (ಯಂತ್ರದ ದೋಷ ಮತ್ತು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ).
ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (MES)-: ಶೇ. 25 ರಷ್ಟು ಹೊಣೆ (ನಿರ್ವಹಣಾ ಕಾರ್ಯದಲ್ಲಿ ವಿಫಲರಾಗಿದ್ದಕ್ಕೆ).
ಸರ್ಕಾರಿ ಇಲಾಖೆ/ಕಟ್ಟಡ ನಿರ್ವಹಣೆ- ಶೇ. 25 ರಷ್ಟು ಹೊಣೆ (ನಿರಂತರ ದೂರುಗಳಿದ್ದರೂ ಕ್ರಮ ಕೈಗೊಳ್ಳದಿದ್ದಕ್ಕೆ).
ತೀರ್ಪಿನ ಮಹತ್ವ ಮತ್ತು ವ್ಯಾಪಕ ಪರಿಣಾಮ
ಪ್ರಸ್ತುತ ಮಹಾನಗರಗಳಲ್ಲಿ ಜಾಗದ ಕೊರತೆಯಿಂದಾಗಿ ಕಟ್ಟಡಗಳು ಆಕಾಶದೆತ್ತರಕ್ಕೆ ಬೆಳೆಯುತ್ತಿವೆ. ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್ಟ್‌ಗಳಲ್ಲಿ ಲಕ್ಷಾಂತರ ಜನರು ಪ್ರತಿದಿನ ಲಿಫ್ಟ್ ಅನ್ನು ನಂಬಿ ಪ್ರಯಾಣಿಸುತ್ತಾರೆ. ಸಣ್ಣ ಉಕ್ಕಿನ ಕ್ಯಾಬಿನ್ ಒಳಗೆ ಕಾಲಿಡುವ ನಾಗರಿಕರು ತಮ್ಮ ಸಂಪೂರ್ಣ ಪ್ರಾಣವನ್ನು ಯಂತ್ರದ ನಂಬಿಕೆಗೆ ಒಪ್ಪಿಸಿರುತ್ತಾರೆ.
ಇಂದಿನ ಧಾವಂತದ ಜೀವನದಲ್ಲಿ ಕಳಪೆ ನಿರ್ವಹಣೆ, ವೋಲ್ಟೇಜ್ ಏರಿಳಿತ ಮತ್ತು ಸುರಕ್ಷತಾ ಮಾನದಂಡಗಳ ಉಲ್ಲಂಘನೆಗಳಿಂದಾಗಿ ಆಗಾಗ್ಗೆ ಲಿಫ್ಟ್ ವೈಫಲ್ಯಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶವು ಕೇವಲ ಒಂದು ಪರಿಹಾರದ ಪ್ರಕರಣವಲ್ಲ, ಬದಲಿಗೆ ಬಿಲ್ಡರ್‌ಗಳು, ಮೇಂಟನೆನ್ಸ್ ಏಜೆನ್ಸಿಗಳು ಮತ್ತು ಲಿಫ್ಟ್ ತಯಾರಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಸುರಕ್ಷತೆ ಎಂಬುದು ಕೇವಲ ನಿರೀಕ್ಷೆಯಲ್ಲ, ಅದೊಂದು ಕಡ್ಡಾಯ ಖಾತರಿ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ.
ನಗರಗಳಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಲಂಬ ವಿಸ್ತರಣೆ (Vertical Growth) ಹಾಗೂ ಗಗನಚುಂಬಿ ಕಟ್ಟಡಗಳ ಸಂಸ್ಕೃತಿಯಲ್ಲಿ ಲಿಫ್ಟ್‌ಗಳು ಅನಿವಾರ್ಯ ಅಂಗವಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಲಿಫ್ಟ್ ವೈಫಲ್ಯಗಳು ಮತ್ತು ದುರ್ಘಟನೆಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ಅತ್ಯಂತ ಮಹತ್ವದ ತಿರುವು ನೀಡಿದೆ.

