ಕ್ಯಾನ್ಸರ್ ಚಿಕಿತ್ಸೆಯ ಕಠಿಣ ಹಂತಗಳನ್ನು ಧೈರ್ಯವಾಗಿ ಎದುರಿಸುತ್ತಿರುವ ನಟಿ ಹೀನಾ ಖಾನ್, ತಮ್ಮ ಆರೋಗ್ಯದ ಹೊಸ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಗುಣಮುಖರಾಗುವ ಪ್ರಕ್ರಿಯೆಯ ಭಾಗವಾಗಿ ‘ಐಸ್ ಥೆರಪಿ’ ಪಡೆದುಕೊಳ್ಳುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎತ್ತರದ ಕಟ್ಟಡದ ಬಾಲ್ಕನಿಯಲ್ಲಿ ಇರಿಸಲಾದ ಮಂಜುಗಡ್ಡೆ ತುಂಬಿದ ಟಬ್ನಲ್ಲಿ ಕುಳಿತು ಹೀನಾ ಖಾನ್ ಈ ಥೆರಪಿ ಪಡೆಯುತ್ತಿದ್ದಾರೆ. ಈ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ಮಾರ್ಗದರ್ಶನಕ್ಕೆ ಅನುಗುಣವಾಗಿ ಉಸಿರಾಟದ ಮೇಲೆ ಗಮನ ಹರಿಸುತ್ತಾ, ತಣ್ಣನೆಯ ನೀರಿಗೆ ತಮ್ಮ ದೇಹವನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವೀಡಿಯೋ ಜತೆಗೆ ಒಂದು ಪ್ರಮುಖ ಸಂದೇಶ ನೀಡಿರುವ ಅವರು, “ನಾನು ಈ ಐಸ್ ಥೆರಪಿಯನ್ನು ತಜ್ಞ ವೈದ್ಯರ ಕಟ್ಟುನಿಟ್ಟಿನ ಉಸ್ತುವಾರಿಯಲ್ಲಿ ಮಾತ್ರ ಮಾಡುತ್ತಿದ್ದೇನೆ. ಯಾರೂ ಕೂಡ ಸೂಕ್ತ ವೈದ್ಯಕೀಯ ಸಲಹೆ ಇಲ್ಲದೆ ಇದನ್ನು ಪ್ರಯತ್ನಿಸಬೇಡಿ. ದೇಹದ ಮಾತು ಆಲಿಸಿ, ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಾನಸಿಕ ಶಕ್ತಿ
ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ವೇಳೆ ಹೀನಾ ಖಾನ್ ತಮ್ಮ ಕ್ಯಾನ್ಸರ್ ಪತ್ತೆಯಾದ ಕ್ಷಣಗಳು ಹಾಗೂ ಕೀಮೋಥೆರಪಿಯ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದರು. ರೋಗದ ತೀವ್ರತೆ ಮತ್ತು ದೇಹದ ಮೇಲಾದ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, “ಕ್ಯಾನ್ಸರ್ನಿಂದಾಗಿ ತೂಕ ಹೆಚ್ಚಾಯಿತು, ಕೂದಲು ಸಂಪೂರ್ಣವಾಗಿ ಉದುರಿಹೋಯಿತು. ಕನ್ನಡಿ ನೋಡಿಕೊಳ್ಳುವುದಕ್ಕೂ ಭಯವಾಗುವಂತಹ ಸ್ಥಿತಿ ಇತ್ತು. ಆರಂಭದಲ್ಲಿ ಧೈರ್ಯ ತಳೆದರೂ, ದಿನಕಳೆದಂತೆ ಧನಾತ್ಮಕವಾಗಿ ಇರುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು. ಪ್ರಸ್ತುತ ಆಧ್ಯಾತ್ಮಿಕ ಚಿಂತನೆಗಳು ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಅವರು ಈ ಕಾಯಿಲೆಯನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ.

