ಬೆಂಗಳೂರು: ಬೈಕ್ ಸವಾರ, ಆತನ ತಾಯಿ ಮತ್ತು ತಾತನ ವಿರುದ್ಧ ಮಾಲೂರು ನ್ಯಾಯಾಧೀಶರು ದಾಖಲಿಸಿದ್ದ ಎಫ್ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ಖಾಸಗಿ ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನ್ಯಾಯಾಧೀಶೆ ಗಾಯತ್ರಿ ಮತ್ತು ಅವರ ಪತಿಗೆ ನಿಧಾನವಾಗಿ ಚಲಿಸುವಂತೆ ಬೈಕ್ ಚಾಲಕ ಹೇಳಿದ್ದಕ್ಕೆ ಜಗಳವಾಡಿದ್ದರು. ಸವಾರನ ಮನೆಯವರೆಗೆ ಚೇಸ್ ಮಾಡಿ ಜಗಳವಾಡಿದ್ದು, ನ್ಯಾಯಾಧೀಶರಾದ ಗಾಯತ್ರಿ ಅವರ ಒತ್ತಡದಿಂದ 69 ವರ್ಷದ ತಾತನನ್ನು ಕೂಡ ಪೊಲೀಸರು ಬಂಧಿಸಿದ್ದರು.
ಜಗಳದ ದೃಶ್ಯ ನ್ಯಾಯಮೂರ್ತಿಗಳಿಗೆ ತೋರಿಸಿದ ಎಸ್ಪಿಪಿ ಬಿ.ಎನ್. ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ದೃಶ್ಯ ತೆಗೆಯಲು ಆದೇಶಿಸಿದ್ದಾರೆ. ತಾವೇ ದೂರುದಾರರು, ತಾವೇ ನ್ಯಾಯಾಧೀಶರು ಆಗಿ ಆದೇಶಿಸಿದ್ದಾರೆ. ಜೆಎಂಎಫ್‌ಸಿ ನ್ಯಾಯಾಧೀಶರ ವರ್ತನೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ನಾಗರೀಕರೊಂದಿಗೆ ಇಂತಹ ವರ್ತನೆ ಸರಿಯಲ್ಲ. ತರವಲ್ಲದ ರೀತಿಯಲ್ಲಿ ಗಾಯತ್ರಿ ವರ್ತಿಸಿದ್ದಾರೆ. ಜಡ್ಜ್ ನಡವಳಿಕೆ ಕೋರ್ಟ್ ನ ಒಳಗೂ ಹೊರಗೂ ವಿಶ್ವಾಸ ಮೂಡಿಸುವಂತೆ ಇರಬೇಕು. ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜಡ್ಜ್ ಗಾಯತ್ರಿ ದಾಖಲಿಸಿದ ಎಫ್ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿವರ
ಸಾರ್ವಜನಿಕರೊಂದಿಗೆ ರಸ್ತೆ ರಂಪಾಟ ನಡೆಸಿ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ ಕೋಲಾರ ಜಿಲ್ಲೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರ ದುರುಪಯೋಗಕ್ಕೆ ಅವರ ವರ್ತನೆ ಉದಾಹರಣೆಯಾಗಿದೆ. ಅವರ ವಿರುದ್ಧ ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟ್ರಾರ್ ಜನರಲ್ ಗೆ ನಿರ್ದೇಶನ ನೀಡಿದೆ.
ತಮ್ಮ ಪತಿಯೊಂದಿಗೆ ನ್ಯಾಯಾಧೀಶೆ ಗಾಯತ್ರಿ ಪ್ರಯಾಣಿಸುತ್ತಿದ್ದ ಖಾಸಗಿ ಕಾರನ್ನು ಹಿಂದಿಕ್ಕಿದ ದ್ವಿಚಕ್ರ ವಾಹನ ಸವಾರರನ್ನು ತಡೆದು ಜಗಳವಾಡಿದ್ದರು. ಅವರ ವಿರುದ್ಧ ಮಾಲೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ರದ್ದುಪಡಿಸುವಂತೆ ಕೋರಿ ಕೆ.ಎಂ. ವಿನಯ್, ವಿ. ಕವಿತಾ ಮತ್ತು ಪಿ. ವೆಂಕಟೇಶ್ ಅವರು ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅರ್ಜಿ ವಿಚಾರಣೆ ನಡೆಸಿದ್ದು, ಘಟನೆಯ ಕುರಿತು ನ್ಯಾಯಾಧೀಶೆ ಗಾಯತ್ರಿ ರಸ್ತೆ ರಂಪಾಟದ ವಿಡಿಯೋವನ್ನು ಮೊಬೈಲ್ ನಲ್ಲಿ ವೀಕ್ಷಿಸಿದ್ದಾರೆ. ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಮತ್ತು ಬೆಂಗಳೂರು ವಕೀಲರ ಸಂಘ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ನ್ಯಾಯಾಧೀಶರಾದ ಗಾಯತ್ರಿ ವರ್ತನೆ ಸರಿಯಲ್ಲ, ಇದು ಅನಪೇಕ್ಷಿತ, ನ್ಯಾಯಾಧೀಶರು ಸಾರ್ವಜನಿಕರ ನಂಬಿಕೆಯನ್ನು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಉಳಿಸಿಕೊಂಡರೆ ಸಾಲದು, ಅದನ್ನು ನಿತ್ಯದ ಸಾರ್ವಜನಿಕ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ನ್ಯಾಯಾಂಗದ ಮೇಲೆ ನಾಗರೀಕರು ಇಟ್ಟಿರುವ ನಂಬಿಕೆ ನಾಶವಾಗುತ್ತದೆ. ನ್ಯಾಯಾಧೀಶರಾದ ಮಾತ್ರಕ್ಕೆ ದರ್ಪ ಅಹಂಕಾರದಿಂದ ನಡೆದುಕೊಳ್ಳುವುದು ಸಲ್ಲದು. ನ್ಯಾಯಾಲಯದ ಆಚೆಗೂ ತಮ್ಮ ಘನತೆ ಕಾಪಾಡಿಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಅರ್ಜಿದಾರರ ವಿರುದ್ಧ ನ್ಯಾಯಾಧೀಶೆ ಗಾಯತ್ರಿ ಅವರು ದಾಖಲಿಸಿದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತಡೆಯಾಜ್ಞೆ ನೀಡಿದ ನ್ಯಾಯ ಪೀಠ ಗಾಯತ್ರಿ ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಯವರ ಮುಂದೆ ಇಡಬೇಕು ಎಂದು ರಿಜಿಸ್ಟ್ರಾರ್ ಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.
ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಇದಕ್ಕೂ ಮೊದಲು ಘಟನೆ ಕುರಿತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವಿಡಿಯೋವನ್ನು ನ್ಯಾಯಮೂರ್ತಿಗಳಿಗೆ ತಮ್ಮ ಮೊಬೈಲ್ ಮೂಲಕ ಪ್ರದರ್ಶಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವಂತೆ ನ್ಯಾಯಾಧೀಶೆ ಗಾಯತ್ರಿ ಅವರೇ ದೂರು ನೀಡಿ, ತಾವೇ ಅದಕ್ಕೆ ಆದೇಶ ಹೊರಡಿಸಿದ್ದಾರೆ. ಅವರು ಈ ರೀತಿ ನಡೆದುಕೊಂಡಿರುವುದು ಇದೇ ಮೊದಲಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ 69 ವರ್ಷದ ವೆಂಕಟೇಶ್ ಅವರನ್ನು ರಾತ್ರೋರಾತ್ರಿ ಪೋಲಿಸ್ ಠಾಣೆಗೆ ಕರೆಸಿಕೊಂಡು ಬಂಧಿಸಲಾಗಿದೆ. ಈ ಹಿಂದೆ ತಮ್ಮ ಮನೆಯ ರಿಪೇರಿ ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನನ್ನು ಕರೆಸಿಕೊಂಡು ಅವರು ಆಕ್ಷೇಪಿಸಿದಾಗ ಬಂಧಿಸುವಂತೆ ಆದೇಶಿಸಿದ್ದರು ಎಂದು ತಿಳಿಸಿದ್ದಾರೆ.

