ಬೆಂಗಳೂರು: ಬಸ್ ಪ್ರಯಾಣದ ವೇಳೆ ಟಿಕೆಟ್ ಖರೀದಿಗೆ ಚಿಲ್ಲರೆ ನೀಡದ ಕಾರಣಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಬಸ್ ನಿಂದ ಕೆಳಗಿಳಿಸಿದ್ದ ಬಿಎಂಟಿಸಿ ಕಂಡಕ್ಟರ್ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಈ ಕುರಿತಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಿಎಂಟಿಸಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರ ಅಮಾನತು ಆದೇಶ ಹಿಂಪಡೆಯುವಂತೆ ತಿಳಿಸಿದ್ದಾರೆ. ಕಳೆದ ಜುಲೈ 11ರಂದು ಬೈರತಿ ಸುರೇಶ್ ಅವರು ರಿಯಾಲಿಟಿ ಚೆಕ್ ಮಾಡಲು ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದರು.
ಈ ವೇಳೆ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ನಿರ್ವಾಹಕ ಟಿ.ಜಿ. ರಾಮಕೃಷ್ಣ ಬೈರತಿ ಸುರೇಶ್ ಅವರನ್ನು ಬಸ್ ನಿಂದ ಕೆಳಗಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು. ಬುಧವಾರ ಸಚಿವರನ್ನು ಭೇಟಿಯಾದ ರಾಮಕೃಷ್ಣ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದಾರೆ. ಬಳಿಕ ಸಾರಿಗೆ ಸಚಿವರು ರಾಮಕೃಷ್ಣ ಅವರ ಅಮಾನತು ಆದೇಶ ಹಿಂಪಡೆಯುವಂತೆ ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

