ದಾವಣಗೆರೆ-ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಸರ್ಕಾರ ಇದುವರೆಗೆ ಬರಗಾಲ ಘೋಷಣೆ ಮಾಡದೇ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬರ ಅಧ್ಯಯನ ಪ್ರವಾಸದ ಅಂಗವಾಗಿ ದಾವಣಗೆರೆ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡದಿದ್ದರೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ. ಬೆಳೆ ವಿಮೆ ಕಂಪನಿಗಳೂ ಪರಿಹಾರ ಬಿಡುಗಡೆ ಮಾಡುವುದಿಲ್ಲ. ಮೊದಲು ಬರಗಾಲ ಘೋಷಣೆ ಮಾಡಿ, ಕನಿಷ್ಠ ಬೆಳೆ ವಿಮೆಯಾದರೂ ಸಿಗುವಂತೆ ಮಾಡಿ ಎಂದು ರೈತರು ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರಕ್ಕೆ ರೈತರ ಸಂಕಷ್ಟಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದರೂ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸಬೇಕಾದವರು ದೆಹಲಿಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಮಲೆನಾಡಿನಲ್ಲಿ ಶೇ.44, ಕರಾವಳಿಯಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.33 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.31 ಮಳೆ ಕೊರತೆ ದಾಖಲಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕೇವಲ ಶೇ.19ರಷ್ಟು ಮಾತ್ರ ಬಿತ್ತನೆ ನಡೆದಿದ್ದು, ಉಳಿದ ಶೇ.81ರಷ್ಟು ಬಿತ್ತನೆ ಆಗಿಲ್ಲ. ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಅಡಿಕೆ ತೋಟಗಳಲ್ಲಿ ಗಿಡಗಳು ಒಣಗಿ ಹೋಗಿದ್ದು, ಐದು ವರ್ಷ ಬೆಳೆಸುವ ಗಿಡಕ್ಕೆ ಸರ್ಕಾರ ಕೇವಲ 16 ರೂ. ಪರಿಹಾರ ಘೋಷಿಸಿರುವುದು ರೈತರಿಗೆ ಮಾಡುವ ಅವಮಾನವಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದಲೇ ಬರ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ ಎಂದರು.
ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷಗಳಲ್ಲಿ ಸುಮಾರು 2,800 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2025-26ನೇ ಸಾಲಿನಲ್ಲಿ ಮಾತ್ರ 787 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರ್ಕಾರ ಮೊದಲು ಬರಗಾಲ ಘೋಷಿಸಿ ಎಸ್‌ಡಿಆರ್‌ಎಫ್ ನಿಯಮಗಳಂತೆ ಪರಿಹಾರ ಬಿಡುಗಡೆ ಮಾಡಬೇಕು. ನಂತರ ಕೇಂದ್ರ ಸರ್ಕಾರದ ನೆರವು ಕೇಳಬೇಕು. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಪ್ರತಿ ಎಕರೆಗೆ 50,000 ಪರಿಹಾರ ನೀಡಬೇಕು. ಹಾನಿಗೊಳಗಾದ ತೆಂಗು ಹಾಗೂ ಅಡಿಕೆ ಮರಗಳಿಗೆ ಪ್ರತಿ ಮರಕ್ಕೆ 10,000 ಪರಿಹಾರ ನೀಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ಬಿಡುಗಡೆ ಮಾಡಿ ಸ್ಥಳೀಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ರಾಜ್ಯದಿಂದ ಮೇವು ಹೊರ ರಾಜ್ಯಗಳಿಗೆ ಸಾಗಿಸುವುದನ್ನು ತಡೆದು, ಜಾನುವಾರುಗಳಿಗೆ ಮೇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಣಕಾಸಿನ ಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು. ಗೃಹಲಕ್ಷ್ಮಿ ಯೋಜನೆಯ ಸಾವಿರಾರು ಕೋಟಿ ರೂಪಾಯಿ ಬಾಕಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಹಾಲಿನ ಸಬ್ಸಿಡಿ ಸೇರಿದಂತೆ ಹಲವು ಯೋಜನೆಗಳ ಹಣ ಬಾಕಿಯಿರುವುದರಿಂದಲೇ ಸರ್ಕಾರ ಬರ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಕಾವೇರಿ ನೀರು ಹಂಚಿಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಸ್ಪಷ್ಟವಾಗಿದೆ. ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡುವ ಪರಿಸ್ಥಿತಿ ಸರ್ಕಾರದ ನಿರ್ಲಕ್ಷ್ಯದಿಂದ ಬಂದಿದೆ. ಕಾನೂನು ತಜ್ಞರೊಂದಿಗೆ ಸಮರ್ಪಕವಾಗಿ ಸಮಾಲೋಚನೆ ನಡೆಸಿಲ್ಲ. ವಕೀಲರಿಗೆ 300 ಕೋಟಿ ಶುಲ್ಕ ನೀಡಿದ್ದರೂ ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಆರ್. ಅಶೋಕ ಹೇಳಿದರು.
ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಲಕ್ಷಾಂತರ ಜನರ ಕುಡಿಯುವ ನೀರಿನ ಭವಿಷ್ಯ ಅಪಾಯದಲ್ಲಿದೆ. ಸರ್ಕಾರ ತಕ್ಷಣ ಕಾನೂನು ಹೋರಾಟವನ್ನು ಬಲಪಡಿಸಿ ರಾಜ್ಯದ ಹಕ್ಕು ಕಾಪಾಡಬೇಕು. ಅಗತ್ಯವಿದ್ದರೆ ವಕೀಲರ ತಂಡವನ್ನೂ ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯಾದ್ಯಂತ ಬರ ಅಧ್ಯಯನ
ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಬರ ಅಧ್ಯಯನ ನಡೆಸಲಾಗುತ್ತಿದ್ದು, ರೈತರ ಸಮಸ್ಯೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ. ಆಗಸ್ಟ್ 13ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಬರಗಾಲ ಘೋಷಣೆ, ರೈತರಿಗೆ ಪರಿಹಾರ ಹಾಗೂ ಕಾವೇರಿ ನೀರು ಹಂಚಿಕೆ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಸರ್ಕಾರ ರೈತರ ಪರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ವಿಧಾನಸಭೆಯೊಳಗೂ ಹೊರಗೂ ತೀವ್ರ ಹೋರಾಟ ನಡೆಸುವುದಾಗಿ ಆರ್. ಅಶೋಕ ಎಚ್ಚರಿಸಿದರು.
ಕಾಂಗ್ರೆಸ್‌ನ ಗಂಜಿ ಕೇಂದ್ರಕ್ಕೆ ಕೋಟಿ ಕೋಟಿ ಪೋಲು
‘ಭಾರತ್ ಜೋಡೋ ಕ್ಲಬ್’ಗಳ ಸ್ಥಾಪನೆಗೆ ನೂರಾರು ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಹೆಸರಿನಲ್ಲಿ ರಾಜ್ಯದ ಪ್ರತಿ ಹಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಕ್ಲಬ್‌ಗಳನ್ನು ಸ್ಥಾಪಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಿ, ಅವರಿಗೆ ಬಂಗಲೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಉದಾರವಾಗಿ ಹಣ ವೆಚ್ಚ ಮಾಡುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರಿಗೆ ಮೂಲಭೂತ ಸೌಲಭ್ಯಗಳನ್ನೂ ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದರು.
ಇನ್ನೊಂದೆಡೆ, ಬರ ಹಾಗೂ ಬೆಳೆ ಹಾನಿಯಿಂದ ತತ್ತರಿಸಿರುವ ರೈತರಿಗೆ ಪರಿಹಾರ ನೀಡಲು ಮಾತ್ರ ಸರ್ಕಾರದ ಬಳಿ ಹಣವಿಲ್ಲ, ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳು ಮತ್ತು ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರ, ಅನ್ನದಾತರ ನೆರವಿಗೆ ಮಾತ್ರ ಹಿಂದೇಟು ಹಾಕುತ್ತಿರುವುದು ಅತ್ಯಂತ ಖಂಡನೀಯ ಎಂದರು.

