HomeLatest Newsಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಪೂರ್ವಾನ್ವಯ ಪರಿಸರ ಅನುಮತಿ ನೀಡುವ 2021ರ ಕಚೇರಿ ಜ್ಞಾಪಕ ಪತ್ರ...

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಪೂರ್ವಾನ್ವಯ ಪರಿಸರ ಅನುಮತಿ ನೀಡುವ 2021ರ ಕಚೇರಿ ಜ್ಞಾಪಕ ಪತ್ರ ರದ್ದು

ನವದೆಹಲಿ -ಪರಿಸರ ಸಂರಕ್ಷಣೆ ಮತ್ತು ಕಾನೂನಿನ ಕಟ್ಟುನಿಟ್ಟಿನ ಪಾಲನೆಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಿಸರ ಅನುಮೋದನೆ (Environmental Clearance – EC) ಪಡೆಯದೆ ಅನಧಿಕೃತವಾಗಿ ಕಾಮಗಾರಿ ಅಥವಾ ಕಾರ್ಯಾಚರಣೆ ಆರಂಭಿಸಿದ ಕೈಗಾರಿಕೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಪೂರ್ವಾನ್ವಯ ( ಪರಿಸರ ಅನುಮತಿ ನೀಡುವ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ 2021ರ ಕಚೇರಿ ಜ್ಞಾಪಕ ಪತ್ರವನ್ನು (OM) ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಈ ಸರ್ವಾನುಮತದ ತೀರ್ಪು ನೀಡಿದೆ.

ಪರಿಸರ ನಿಯಮಗಳ ಚೌಕಟ್ಟಿನಲ್ಲಿ ಯಾವುದೇ ಯೋಜನೆಗಳು ಮೊದಲು ಕಾರ್ಯಾಚರಣೆಯನ್ನು ಆರಂಭಿಸಿ, ನಂತರ ಅನುಮೋದನೆ ಪಡೆಯುವ ಕ್ರಮ ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀರ್ಪಿನ ವ್ಯಾಪ್ತಿ ಮತ್ತು ಮಿತಿಗಳು

ಈ ತೀರ್ಪು ಭವಿಷ್ಯಕ್ಕೆ ಅನ್ವಯಿಸಲಿದೆ (Prospective application). ಆದ್ದರಿಂದ ಈ ಹಿಂದೆ ಹಸಿರು ಅನುಮತಿ ಪಡೆದು ಕಾರ್ಯಾಚರಣೆಯಲ್ಲಿರುವ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಸಾಧಾರಣ ಸಂದರ್ಭಗಳಲ್ಲಿ ಮತ್ತು ವಿಶಾಲ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕೇವಲ ಮಾನ್ಯ ಶಾಸನಬದ್ಧ ಅಧಿಸೂಚನೆ (Statutory Notification) ಮೂಲಕ ಮಾತ್ರ ಸೀಮಿತ ಹಾಗೂ ಸಮಯ-ಬದ್ಧ ಕ್ಷಮಾದಾನ ಯೋಜನೆಯನ್ನು ಪರಿಚಯಿಸಬಹುದೇ ಹೊರತು, ಕಚೇರಿ ಜ್ಞಾಪಕ ಪತ್ರದ (OM) ಮೂಲಕ ಇಂತಹ ಕಾರ್ಯವಿಧಾನ ರೂಪಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಗತ್ಯಬಿದ್ದರೆ ಮತ್ತು ಸೂಕ್ತವೆಂದು ಕಂಡುಬಂದಲ್ಲಿ ಉನ್ನತ ನ್ಯಾಯಾಲಯಗಳು ಅಂತಹ ಯೋಜನೆಗಳಿಗೆ ಪೋಸ್ಟ್-ಫ್ಯಾಕ್ಟೋ ಇಸಿ ನೀಡುವ ಅಧಿಕಾರವನ್ನು ಹೊಂದಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹಿನ್ನೆಲೆ

ಪ್ರಕರಣದ ಹಿನ್ನೆಲೆ ಮತ್ತು ಮಹತ್ವ

ಪರಿಸರ ಮಾನದಂಡಗಳನ್ನು ಗಾಳಿಗೆ ತೂರಿ ಅನುಮತಿರಹಿತವಾಗಿ ಮುನ್ನಡೆಯುವ ಯೋಜನೆಗಳಿಗೆ ಅಧಿಕಾರಿಗಳ ಮಟ್ಟದ ಆಡಳಿತಾತ್ಮಕ ಆದೇಶಗಳ ಮೂಲಕ ವಿನಾಯಿತಿ ನೀಡುವುದು ಪರಿಸರ ಸಮತೋಲನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕಳೆದ ಎಪ್ರಿಲ್ 1 ರಂದು ಹಸಿರು ಮಾನದಂಡಗಳ ಉಲ್ಲಂಘನೆ ಹಾಗೂ ಇದಕ್ಕೆ ಸಂಬಂಧಿಸಿದ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ಇಂದಿನ ತೀರ್ಪು ಪರಿಸರ ಕಾಯ್ದೆಗಳ ಜಾರಿಯಲ್ಲಿ ಕಾರ್ಯಾಂಗದ ಮನಬಂದಂತೆ ಹೊರಡಿಸುವ ಆಡಳಿತಾತ್ಮಕ ಆದೇಶಗಳಿಗೆ ಸ್ಪಷ್ಟ ಕಡಿವಾಣ ಹಾಕಿದ್ದು, ಕಾನೂನಿನ ಆಡಳಿತ ಮತ್ತು ಪರಿಸರ ಸಂರಕ್ಷಣೆಗೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular