ಆಗಸ್ಟ್ 1ರಂದು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ವಿವೇಕ ಸ್ಮಾರಕ’ ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ಅಧಿಕಾರಿಗಳ ಜತೆ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸಭೆ ನಡೆಸಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಅಧಿಕಾರಿಗಳು ಕಳೆದ ವಾರದಿಂದಲೇ ವಿವೇಕ ಸ್ಮಾರಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನ್ಯೂನತೆಗಳನ್ನು ಹುಡುಕಿ ಸರಿಪಡಿಸಲು ಮುಂದಾಗಿದ್ದು, ರಿಪೇರಿ ಕೆಲಸಗಳು ಭರದಿಂದ ಸಾಗಿವೆ. ಅದೆಷ್ಟೋ ದಿನಗಳಿಂದ ಬಿದ್ದಿದ್ದ ಗುಂಡಿಗಳಿಗೆ ಡಾಂಬರ್ ಭಾಗ್ಯ ಬಂದಿದ್ದು, ಕೆಆರ್ಎಸ್ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಹಾಗೂ ಜೆಎಲ್ಬಿ ರಸ್ತೆಗಳಿಗೆ ಭರ್ಜರಿ ಡಾಂಬರೀಕರಣ ನಡೆದಿದ್ದು, ಸುತ್ತಮುತ್ತಲಿನ ಗೋಡೆಗಳು ಸುಂದರ ಪೇಂಟ್ಗಳಿಂದ ಕಂಗೊಳಿಸುತ್ತಿವೆ.
ಇದನ್ನು ಕಂಡ ಜನ ಸಾಮಾನ್ಯರು ಇದೇನ್ ಗುರೂ, ಎಷ್ಟೇ ಕೇಳಿದರೂ ಈಡೇರದ ಬೇಡಿಕೆಗಳು ಬೆರಳೆಣಿಕೆಯ ದಿನಗಳಲ್ಲಿ ಈಡೇರಿಬಿಟ್ಟಿವೆ ಎಂದು ಶಾಕ್ ಆಗಿದ್ದಾರೆ. ಶಿಲ್ಪಾ ರವಿ ಎಂಬುವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ನಗರದ ರೈಲ್ವೆ ನಿಲ್ದಾಣದ ಹಿಂಭಾಗದ ಪ್ರವೇಶ ದ್ವಾರದ ಕೆಆರ್ಎಸ್ ರಸ್ತೆಗೆ ದಿಢೀರ್ ಡಾಂಬರೀಕರಣವಾಗಿರುವುದನ್ನು ಕಂಡು ಬೆರಗಾಗಿದ್ದಾರೆ.
ನೋಡಿ ಸ್ನೇಹಿತರೇ ಮೋದಿ ಬರುತ್ತಿದ್ದಾರೆ ಎನ್ನುವ ಕಾರಣಕ್ಕೆ ಎಷ್ಟು ಚೆನ್ನಾಗಿ ಹಾಗೂ ವೇಗವಾಗಿ ರಸ್ತೆ ರೆಡಿಯಾಗಿಬಿಟ್ಟಿದೆ, ನಾವು ಸಾಮಾನ್ಯ ಜನರು ರಸ್ತೆ ಸರಿ ಇಲ್ಲ ಎಂದು ಎಷ್ಟೇ ವಿಡಿಯೊ ಮಾಡಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಮೋದಿ ತೆರಳಲಿರುವ ರಸ್ತೆಗಳನ್ನು ಮಾತ್ರ ಈ ರೀತಿ ಸಿದ್ಧಪಡಿಸಲಾಗಿದ್ದು, ನಮ್ಮ ಮೈಸೂರು ನೀಟಾಗಿದೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡಿದ್ದಾರೆ, ಒಂದು ವೇಳೆ ಮೋದಿ ಏನಾದರೂ ಅಕ್ಕಪಕ್ಕದ ರಸ್ತೆಗಳಿಗೇನಾದರೂ ಬಂದರೆ ಇನ್ಯಾವತ್ತೂ ಮೈಸೂರಿಗೆ ಬರುವುದೇ ಇಲ್ಲವೇನೋ ಎಂದು ವ್ಯಂಗ್ಯವಾಡಿದ್ದಾರೆ. ಈ ಹಿಂದೆ ರಾಷ್ಟ್ರಪತಿ ಆಗಮಿಸಿದ್ದಾಗಲೂ ನಗರದ ಜೆಸಿಇ ಕಾಲೇಜು ರಸ್ತೆಯನ್ನು ಹೀಗೆ ಸಿದ್ಧಪಡಿಸಿದ್ದರು, ಆದರೆ ಈಗ ಆ ರಸ್ತೆ ಗುಂಡಿ ಬಿದ್ದಿದ್ದರೂ ಯಾರೂ ಕೇರ್ ಮಾಡುತ್ತಿಲ್ಲ, ಇಷ್ಟೇ ಇವರ ಹಣೆಬರಹ ಎಂದು ಕಿಡಿಕಾರಿ ‘ಅಧಿಕಾರಿಗಳಿಗೆ ನನ್ನ ಧಿಕ್ಕಾರವಿರಲಿ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
https://www.instagram.com/reel/DbVgK_MJv_F

