HomeKarnatakaBREAKING : 'MLC' ಸ್ಥಾನ ಕೊಡಿಸುವುದಾಗಿ ಮಂಗಳೂರು ಮೂಲದ ಮಹಿಳೆಗೆ ₹1.50 ಕೋಟಿ ವಂಚನೆ; ಬೆಂಗಳೂರಲ್ಲಿ...

BREAKING : ‘MLC’ ಸ್ಥಾನ ಕೊಡಿಸುವುದಾಗಿ ಮಂಗಳೂರು ಮೂಲದ ಮಹಿಳೆಗೆ ₹1.50 ಕೋಟಿ ವಂಚನೆ; ಬೆಂಗಳೂರಲ್ಲಿ ದೂರು ದಾಖಲು

ಬೆಂಗಳೂರು: ಕಾಂಗ್ರೆಸ್‌ನಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ₹1.50 ಕೋಟಿ ಪಡೆದು ವಂಚನೆ ಎಸಗಿರುವ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಮೂಲದ ಸಮಾಜಸೇವಕಿ ನೀಡಿರುವ ದೂರಿನಲ್ಲಿ, ಆರೋಪಿಯು ಪ್ರಮುಖ ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡು ರಾಜಕೀಯ ಸಂಪರ್ಕದ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳೂರಿನ ಮೂಲದ ಸಮಾಜಸೇವಕಿಯಾಗಿರುವ ಮಹಿಳೆ ಖಾಸಗಿ ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಯರಿಸ್ವಾಮಿ ಎಂಬಾತ ತನ್ನನ್ನು ಕಾಂಗ್ರೆಸ್‌ನ ಪ್ರಮುಖ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡು, ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ನೇರ ಸಂಪರ್ಕವಿದೆ ಎಂದು ನಂಬಿಸಿದ್ದಾನೆ ಎನ್ನಲಾಗಿದೆ. ತನ್ನ ಮಾತಿಗೆ ವಿಶ್ವಾಸ ಮೂಡಿಸಲು ಹಲವು ರಾಜಕೀಯ ನಾಯಕರೊಂದಿಗೆ ಇರುವ ಫೋಟೋಗಳನ್ನೂ ತೋರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ, “ನೀವು ಸಮಾಜಸೇವೆ ಮಾಡುತ್ತಿದ್ದೀರಿ, ಕಾಂಗ್ರೆಸ್‌ನಿಂದ ನಿಮಗೆ MLC ಸ್ಥಾನ ಕೊಡಿಸುತ್ತೇನೆ” ಎಂದು ಹೇಳಿ ಆರಂಭದಲ್ಲಿ ₹5 ಕೋಟಿ ಬೇಡಿಕೆ ಇಟ್ಟಿದ್ದಾನೆ. ನಂತರ ಮಾತುಕತೆಯ ಬಳಿಕ ₹1.25 ಕೋಟಿಗೆ ಒಪ್ಪಂದವಾಗಿದ್ದು, 2024ರ ಆಗಸ್ಟ್‌ನಿಂದ 2025ರ ಜನವರಿವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹1.50 ಕೋಟಿ ಹಣವನ್ನು ಯರಿಸ್ವಾಮಿ ಹಾಗೂ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಅವರಿಗೆ ನೀಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಹಣ ಪಡೆದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಮಾಡಿಸುವ ನೆಪದಲ್ಲಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದು, ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಆರೋಪಿಯು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಂತರ MLC ಸ್ಥಾನವೂ ಸಿಗದೆ, ಹಣವೂ ವಾಪಸ್ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಹಣ ಕೇಳಿದಾಗ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ದೂರಿನ ಆಧಾರಿತವಾಗಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿದುಬರಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular