ಆಗಸ್ಟ್ 1ರಿಂದ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಫ್ರಿಜ್, ಟಿವಿ, ವಾಷಿಂಗ್ ಮೆಷಿನ್, ಕಾರು, ಬಟ್ಟೆ ಸೇರಿದಂತೆ ಹಲವು ದೈನಂದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚ, ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಸಾಗಣೆ ವೆಚ್ಚ ಹೆಚ್ಚಳದ ಪರಿಣಾಮ ಹಲವು ಕಂಪನಿಗಳು ಬೆಲೆ ಪರಿಷ್ಕರಣೆಗೆ ಮುಂದಾಗಿದ್ದು, ಹೊಸ ದರಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಇದರಿಂದ ಗ್ರಾಹಕರ ಜೇಬಿನ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾರಿಗೆ ವೆಚ್ಚದ ಹೆಚ್ಚಳ ಹಾಗೂ ರೂಪಾಯಿ ಮೌಲ್ಯದ ಏರಿಳಿತವೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಇಟಿ (ET) ವರದಿ ಪ್ರಕಾರ, ಪ್ಯಾಕ್ ಮಾಡಿದ ಚಹಾ, ಹೇರ್ ಆಯಿಲ್, ರೆಫ್ರಿಜರೇಟರ್, ಟೆಲಿವಿಷನ್, ಬ್ರಾಂಡೆಡ್ ಬಟ್ಟೆಗಳು ಹಾಗೂ ವಾಹನಗಳ ಬೆಲೆ ಆಗಸ್ಟ್‌ನಿಂದ 6-8% ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಓಣಂನಿಂದ ಆರಂಭವಾಗಿ ದೀಪಾವಳಿ ತನಕ ಸಾಗುವ ಹಬ್ಬಗಳ ಸೀಸನ್‌ಗೂ ಮುನ್ನ ಈ ಬೆಲೆ ಏರಿಕೆಯನ್ನು ಜಾರಿಗೆ ತರಲು ಕಂಪನಿಗಳು ಸಜ್ಜಾಗಿವೆ.
ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆ
ಹೈಯರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಎನ್.ಎಸ್. ಮಾತನಾಡಿ, “ಪಶ್ಚಿಮ ಏಷ್ಯಾ ಸಂಘರ್ಷ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಕಚ್ಚಾ ವಸ್ತುಗಳು, ಕಮೋಡಿಟಿ ಹಾಗೂ ಕ್ರೂಡ್ ಡೆರಿವೇಟಿವ್‌ಗಳ ಬೆಲೆ ಇನ್ನೂ ಅಸ್ಥಿರವಾಗಿದೆ. ಇತ್ತೀಚಿನ ಉದ್ವಿಗ್ನತೆಗಳಿಂದ ಮತ್ತೊಮ್ಮೆ ಬೆಲೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ” ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಹೆಚ್ಚಿದ ವೆಚ್ಚದ ಸಂಪೂರ್ಣ ಭಾರವನ್ನು ಗ್ರಾಹಕರ ಮೇಲೆ ಹಾಕಿರಲಿಲ್ಲ. ಆದರೆ ಈಗ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ Calvin Klein ಹಾಗೂ Tommy Hilfiger ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡುವ Arvind Fashions ಕೂಡ ಬೆಲೆ ಪರಿಷ್ಕರಣೆಯ ಸುಳಿವು ನೀಡಿದೆ. ಕಂಪನಿಯ ಸಿಇಒ ಅಮೀಷಾ ಜೈನ್, ಲಾಭಾಂಶವನ್ನು ಕಾಪಾಡಿಕೊಳ್ಳಲು ವೆಚ್ಚ ನಿಯಂತ್ರಣ ಹಾಗೂ ಅಗತ್ಯವಿದ್ದರೆ ಬೆಲೆ ಏರಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಬ್ರಾಂಡೆಡ್ ಬಟ್ಟೆಗಳ ಬೆಲೆಯೂ ಏರಿಕೆ
ಇಲ್ಲಿಯವರೆಗೆ ಕಡಿಮೆ ದರದಲ್ಲಿ ಖರೀದಿಸಿದ್ದ ಹಳೆಯ ಸ್ಟಾಕ್ ಮಾರಾಟ ಮಾಡುತ್ತಿದ್ದ ಕಾರಣ ಬಟ್ಟೆಗಳ ಬೆಲೆ ಹೆಚ್ಚಳವಾಗಿರಲಿಲ್ಲ. ಆದರೆ ಈಗ ಹೆಚ್ಚಿನ ದರದಲ್ಲಿ ಖರೀದಿಸಿದ ಹೊಸ ಸೀಸನ್‌ನ ಸ್ಟಾಕ್ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ.ಆಗಸ್ಟ್‌ನಲ್ಲಿ ಅನೇಕ ಉಡುಪು ಕಂಪನಿಗಳು 8% ವರೆಗೆ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ದುಬಾರಿ, ಸಾರಿಗೆ ವೆಚ್ಚ ಮತ್ತು ರೂಪಾಯಿ ಮೌಲ್ಯದ ಏರಿಳಿತ ಇದರ ಪ್ರಮುಖ ಕಾರಣವಾಗಿದೆ.
ಎಲೆಕ್ಟ್ರಾನಿಕ್ಸ್‌ಗೂ ಬೆಲೆ ಬಿಸಿ
ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಆಗಸ್ಟ್‌ನಿಂದ ವಿವಿಧ ಉತ್ಪನ್ನಗಳ ಬೆಲೆಯನ್ನು 4-6% ವರೆಗೆ ಹೆಚ್ಚಿಸಲು ಯೋಜಿಸಿವೆ.
- ಈ ವರ್ಷವೇ ಫ್ರಿಜ್ ಹಾಗೂ ವಾಷಿಂಗ್ ಮಷೀನ್‌ಗಳ ಬೆಲೆ ಈಗಾಗಲೇ 10%ಕ್ಕೂ ಹೆಚ್ಚು ಏರಿಕೆಯಾಗಿದೆ.
- ಮೆಮೊರಿ ಚಿಪ್‌ಗಳ ಬೆಲೆ ಹಾಗೂ ಸರಬರಾಜಿನ ಕೊರತೆಯಿಂದ ಟಿವಿಗಳ ಬೆಲೆ 15%ಕ್ಕೂ ಹೆಚ್ಚು ಏರಿಕೆಯಾಗಿದೆ.
- ಕಳೆದ 8-9 ತಿಂಗಳಲ್ಲಿ ಮೆಮೊರಿ ಚಿಪ್ ದರ ಮೂರು ಪಟ್ಟು ಏರಿರುವುದರಿಂದ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಹೆಚ್ಚಾಗುತ್ತಿದೆ.
ಕಾರುಗಳೂ ದುಬಾರಿ
ದೇಶದ ಅತಿದೊಡ್ಡ ಕಾರು ತಯಾರಕ Maruti Suzuki ಆಗಸ್ಟ್‌ನಿಂದ ಕಾರುಗಳ ಬೆಲೆಯನ್ನು ₹30,000 ವರೆಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಲಿದೆ.Honda Cars India ಕೂಡ ಆಗಸ್ಟ್ 1ರಿಂದ ಬೆಲೆ ಹೆಚ್ಚಿಸಲಿದೆ. ರೂಪಾಯಿ ಮೌಲ್ಯ ಕುಸಿತದಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು Mercedes-Benz India ಮುಂದಿನ ತ್ರೈಮಾಸಿಕದಲ್ಲಿ ಬೆಲೆ ಏರಿಕೆಗೆ ಸಿದ್ಧತೆ ನಡೆಸಿದೆ.ಇದಕ್ಕೂ ಮುನ್ನವೇ Tata Motors ಹಾಗೂ Mahindra & Mahindra ಈ ತಿಂಗಳ ಆರಂಭದಲ್ಲೇ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.
Mercedes-Benz India ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಅಯ್ಯರ್, ಬೆಲೆ ಏರಿಕೆಯ ಅಂತಿಮ ಪ್ರಮಾಣವನ್ನು ನಿರ್ಧರಿಸುವ ಮೊದಲು ರೂಪಾಯಿ ಮೌಲ್ಯದ ಚಲನವಲನವನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಐಷಾರಾಮಿ ವಾಹನಗಳಿಗೆ ಬೇಡಿಕೆ ಉತ್ತಮವಾಗಿದ್ದರೂ, ಆಮದು ವೆಚ್ಚ ಹಾಗೂ ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ಸವಾಲಾಗಿವೆ ಎಂದು ಅವರು ಹೇಳಿದ್ದಾರೆ. 2026ರ ಮೊದಲಾರ್ಧದಲ್ಲೇ ಕಂಪನಿ ಒಟ್ಟು 4% ಬೆಲೆ ಏರಿಕೆ ಮಾಡಿದೆ.
FMCG ಉತ್ಪನ್ನಗಳಿಗೂ ಬೆಲೆ ಏರಿಕೆ
FMCG ಕಂಪನಿಗಳಿಗೆ ಪೆಟ್ರೋಲಿಯಂ ಆಧಾರಿತ ಕಚ್ಚಾ ವಸ್ತುಗಳಾದ Linear Low-Density Polyethylene (LLDPE) ಹಾಗೂ ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆ ಅಸ್ಥಿರತೆಯೂ ಹೊಡೆತ ನೀಡಿದೆ.Tata Consumer Products ಮತ್ತು Bajaj Consumer Care ಎರಡೂ ತಮ್ಮ ಇತ್ತೀಚಿನ ಆದಾಯ ಪ್ರಕಟಣೆಯಲ್ಲಿ ದರ ಏರಿಕೆ ಒತ್ತಡದ ಬಗ್ಗೆ ಉಲ್ಲೇಖಿಸಿವೆ.Bajaj Consumer Care ವ್ಯವಸ್ಥಾಪಕ ನಿರ್ದೇಶಕ ನವೀನ್ ಪಾಂಡೆ ಮಾತನಾಡಿ, ಕೈಗಾರಿಕೆ ಮತ್ತೊಮ್ಮೆ ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚವನ್ನು ಎದುರಿಸುತ್ತಿದೆ. ಸೆಪ್ಟೆಂಬರ್ ತ್ರೈಮಾಸಿಕದವರೆಗೂ ಲಾಭಾಂಶದ ಮೇಲಿನ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ. ಬಳಿಕ ಪರಿಸ್ಥಿತಿ ನಿಧಾನವಾಗಿ ಸುಧಾರಿಸಬಹುದು ಎಂದು ತಿಳಿಸಿದ್ದಾರೆ.ಕೊಯ್ಲು ಕಾಲವಾಗಿದ್ದರೂ ಸಾಸಿವೆ ಎಣ್ಣೆ, ಬಾದಾಮಿ ಎಣ್ಣೆ ಸೇರಿದಂತೆ ಅಡುಗೆ ಎಣ್ಣೆಗಳ ಬೆಲೆ ಅಸಾಧಾರಣವಾಗಿ ಹೆಚ್ಚಿರುವುದಾಗಿ ಅವರು ಹೇಳಿದ್ದಾರೆ.

