HomeLatest Newsಕಣ್ಣಿನ ಸೈಲೆಂಟ್ ಕಿಲ್ಲರ್ ಗ್ಲಾಕೋಮಾ: ಲಕ್ಷಣಗಳು, ಅಪಾಯ ಯಾರಿಗೆ ಹೆಚ್ಚು? ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಏಕೆ...

ಕಣ್ಣಿನ ಸೈಲೆಂಟ್ ಕಿಲ್ಲರ್ ಗ್ಲಾಕೋಮಾ: ಲಕ್ಷಣಗಳು, ಅಪಾಯ ಯಾರಿಗೆ ಹೆಚ್ಚು? ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಏಕೆ ಅಗತ್ಯ?

ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಯಾವುದೇ ಸುಳಿವು ನೀಡದೆ ದೃಷ್ಟಿಯನ್ನು ಕಸಿಯುವ ಗ್ಲಾಕೋಮಾ (Glaucoma) ಕಾಯಿಲೆ ಇಂದು ಜಾಗತಿಕ ಸವಾಲಾಗಿ ಪರಿಣಮಿಸಿದೆ. ಯಾವುದೇ ನೋವು ಅಥವಾ ಆರಂಭಿಕ ಲಕ್ಷಣಗಳನ್ನು ತೋರಿಸದೆ, ಕ್ರಮೇಣ ದೃಷ್ಟಿ ನರವನ್ನು ಹಾನಿಗೊಳಿಸಿ ಶಾಶ್ವತ ಅಂಧತ್ವಕ್ಕೆ ದೂಡುವ ಸಾಮರ್ಥ್ಯ ಹೊಂದಿರುವುದರಿಂದ ಇದನ್ನು ದೃಷ್ಟಿಯ ಮೌನ ಕಳ್ಳ (Silent Thief of Sight) ಎಂದು ಕರೆಯಲಾಗುತ್ತದೆ.

ಭಾರತ ಒಂದರಲ್ಲೇ ಸುಮಾರು 12 ಮಿಲಿಯನ್ (1.2 ಕೋಟಿ) ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುರದೃಷ್ಟವಶಾತ್, ಶೇ. 90 ರಷ್ಟು ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿ ಕಾಯಿಲೆ ಪತ್ತೆಯಾಗುವುದೇ ಇಲ್ಲ. ಪರಿಣಾಮವಾಗಿ, ಪ್ರತಿ ವರ್ಷ ಗ್ಲಾಕೋಮಾದಿಂದ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಏನಿದು ಗ್ಲಾಕೋಮಾ?

ಗ್ಲಾಕೋಮಾ ಎಂಬುದು ಕಣ್ಣಿನ ಹಿಂಭಾಗದಲ್ಲಿದ್ದು, ಮೆದುಳಿಗೆ ದೃಶ್ಯ ಸಂಕೇತಗಳನ್ನು ರವಾನಿಸುವ ‘ಆಪ್ಟಿಕ್ ನರ್ವ್’ (Optic Nerve) ಅನ್ನು ಹಾನಿಗೊಳಿಸುವ ಒಂದು ಸಂಕೀರ್ಣ ಕಣ್ಣಿನ ರೋಗ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಕಣ್ಣುಗುಡ್ಡೆಗಳ ಒಳಭಾಗದಲ್ಲಿ ಆಕ್ವಿಯಸ್ ಹ್ಯೂಮರ್ ಎಂಬ ದ್ರವವಿರುತ್ತದೆ. ಇದು ಸಾಧಾರಣವಾಗಿ 10 ರಿಂದ 20 mm Hg ನಷ್ಟು ಒತ್ತಡದಲ್ಲಿರುತ್ತದೆ ಈ ದ್ರವದ ಉತ್ಪಾದನೆ ಮತ್ತು ಹರಿದುಹೋಗುವಿಕೆಯಲ್ಲಿ ಸಮತೋಲನ ತಪ್ಪಿ, ಒತ್ತಡವು 20 mm Hg ದಾಟಿದಾಗ, ಅದು ಆಪ್ಟಿಕ್ ನರದ ಮೇಲೆ ತೀವ್ರ ಒತ್ತಡವನ್ನು ಹೇರಲು ಪ್ರಾರಂಭಿಸುತ್ತದೆ. ಇದು ಕಾಲಕ್ರಮೇಣ ನರವನ್ನು ನಾಶಪಡಿಸಿ ಅಂಧತ್ವಕ್ಕೆ ಕಾರಣವಾಗುತ್ತದೆ.

ಪ್ರಮುಖ ವಿಧಗಳು:


ಪ್ರೈಮರಿ ಓಪನ್-ಆಂಗಲ್ ಗ್ಲಾಕೋಮಾ: ದ್ರವ ಹರಿಯುವ ಮಾರ್ಗದಲ್ಲಿ ಸ್ಪಷ್ಟ ತಡೆ ಕಾಣಿಸದಿದ್ದರೂ, ಒತ್ತಡ ಹೆಚ್ಚಾಗಿ ನಿಧಾನವಾಗಿ ಪಾರ್ಶ್ವ ದೃಷ್ಟಿ ಕುಂದುತ್ತದೆ.

ಪ್ರೈಮರಿ ಆಂಗಲ್-ಕ್ಲೋಸರ್ ಗ್ಲಾಕೋಮಾ: ಕಣ್ಣಿನ ದ್ರವದ ಮಾರ್ಗ ಸಡನ್ ಆಗಿ ಮುಚ್ಚಿಹೋಗಿ ಕಣ್ಣಿನ ಒತ್ತಡ ತೀವ್ರವಾಗಿ ಜಿಗಿಯುತ್ತದೆ. ಇದು ತುರ್ತು ವೈದ್ಯಕೀಯ ಸ್ಥಿತಿಯಾಗಿದೆ.

ನಾರ್ಮಲ್-ಟೆನ್ಷನ್ ಗ್ಲಾಕೋಮಾ: ಕಣ್ಣಿನ ಒತ್ತಡ ಸಾಧಾರಣವಾಗಿದ್ದರೂ ಸಹ ದೃಷ್ಟಿ ನರ ಹಾನಿಗೊಳಗಾಗುತ್ತದೆ.

ಆರಂಭಿಕ ಚಿಹ್ನೆಗಳು ಮತ್ತು ಮುನ್ನೆಚ್ಚರಿಕೆಗಳು


ಆರಂಭಿಕ ಹಂತದಲ್ಲಿ ಇದು ಯಾವುದೇ ನೋವನ್ನು ಉಂಟುಮಾಡುವುದಿಲ್ಲ. ಆದರೆ, ರೋಗ ಮುಂದುವರಿದಂತೆ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ:

ಪಾರ್ಶ್ವ ದೃಷ್ಟಿ ನಷ್ಟ : ಎದುರಿಗಿರುವ ವಸ್ತುಗಳು ಕಾಣಿಸಿದರೂ, ಕಣ್ಣಿನ ಪಕ್ಕದ ನೋಟದ ಕೋನ ಕಿರಿದಾಗುತ್ತಾ ಹೋಗುತ್ತದೆ.

ಟನೆಲ್ ವಿಷನ್ : ಕೇವಲ ನಟ್ಟನಡುವಿನ ಭಾಗ ಮಾತ್ರ ಕಾಣಿಸಿ, ಕಾಲುವೆಯೊಳಗಿಂದ ನೋಡಿದಂತೆ ದೃಷ್ಟಿ ಸೀಮಿತಗೊಳ್ಳುವುದು.

ದೀಪಗಳ ಸುತ್ತ ರೇನ್‌ಬೋ ವರ್ತುಲಗಳು : ರಾತ್ರಿ ವೇಳೆಯಲ್ಲಿ ದೀಪಗಳನ್ನು ನೋಡುವಾಗ ಸುತ್ತಲೂ ಬಣ್ಣದ ಪ್ರಭಾವಲಯಗಳು ಕಾಣಿಸುವುದು ಕಣ್ಣಿನ ಒತ್ತಡ ಹೆಚ್ಚಿರುವುದರ ಸಂಕೇತ.

ದಿಢೀರ್ ಲಕ್ಷಣಗಳು: ಕಣ್ಣಿನಲ್ಲಿ ತೀವ್ರ ನೋವು, ಕೆಂಪಾಗುವುದು, ಮಸುಕಾದ ದೃಷ್ಟಿ, ತಲೆನೋವು ಹಾಗೂ ವಾಕರಿಕೆ/ವಾಂತಿ (ಆಂಗಲ್-ಕ್ಲೋಸರ್ ಗ್ಲಾಕೋಮಾದಲ್ಲಿ).

ಅಪಾಯ ಯಾರಿಗೆ ಹೆಚ್ಚು?

ವಯಸ್ಸು: 40 ವರ್ಷ ದಾಟಿದವರಲ್ಲಿ ಈ ಅಪಾಯ ಹೆಚ್ಚು.

ಆನುವಂಶಿಕತೆ: ಕುಟುಂಬದಲ್ಲಿ ಯಾರಿಗಾದರೂ ಗ್ಲಾಕೋಮಾ ಇದ್ದರೆ, ಬರುವ ಸಾಧ್ಯತೆ 10 ಪಟ್ಟು ಹೆಚ್ಚಿರುತ್ತದೆ.

ದೀರ್ಘಕಾಲದ ಕಾಯಿಲೆಗಳು: ಮಧುಮೇಹ ಅಧಿಕ ರಕ್ತದೊತ್ತಡ ಮೈಗ್ರೇನ್ ಹಾಗೂ ಧೂಮಪಾನದ ಅಭ್ಯಾಸ ಇರುವವರು.

ಕಣ್ಣಿನ ಇತರೆ ತೊಂದರೆಗಳು: ಸಮೀಪದೃಷ್ಟಿ (Myopia), ದೂರದೃಷ್ಟಿ, ಹಳೆಯ ಕಣ್ಣಿನ ಗಾಯಗಳು, ಶಸ್ತ್ರಚಿಕಿತ್ಸೆ ಹಾಗೂ ದೀರ್ಘಕಾಲ ಸ್ಟೀರಾಯ್ಡ್ ಐ ಡ್ರಾಪ್ಸ್ ಬಳಕೆ.

ಡಿಜಿಟಲ್ ಜಗತ್ತು: ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರು ಕಣ್ಣಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ತಡೆಗಟ್ಟುವುದು ಮತ್ತು ಚಿಕಿತ್ಸಾ ಮಾರ್ಗಗಳು

ಗ್ಲಾಕೋಮಾದಿಂದ ಒಮ್ಮೆ ನಷ್ಟವಾದ ದೃಷ್ಟಿಯನ್ನು ಮರಳಿ ಪಡೆಯಲು ಯಾವುದೇ ಸಂಪೂರ್ಣ ಕ್ಯೂರ್ ಇಲ್ಲ. ಆದರೆ, ಬೇಗ ಪತ್ತೆಹಚ್ಚಿದರೆ ದೃಷ್ಟಿ ಮತ್ತಷ್ಟು ಕುಸಿಯದಂತೆ ತಡೆಯಬಹುದು.

ನಿಯಮಿತ ತಪಾಸಣೆ: 40 ವರ್ಷ ದಾಟಿದವರು ಅಥವಾ ಅಪಾಯಕಾರಿ ಲಕ್ಷಣ ಇರುವವರು ವರ್ಷಕ್ಕೊಮ್ಮೆ ಕಣ್ಣಿನ ವೈದ್ಯರಿಂದ ‘ಟೋನೊಮೆಟ್ರಿ’ ‘ಒಸಿಟಿ’ (OCT) ಹಾಗೂ ಪೆರಿಮೆಟ್ರಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಕಡ್ಡಾಯ.

ಚಿಕಿತ್ಸೆ: ವೈದ್ಯರು ಸೂಚಿಸುವ ಕಣ್ಣಿನ ಹನಿಗಳು ಮಾತ್ರೆಗಳು, ಲೇಸರ್ ಥೆರಪಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನೊಳಗಿನ ಒತ್ತಡವನ್ನು ನಿಯಂತ್ರಣದಲ್ಲಿಡಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular