ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ 36ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಅವರ ಪಾಲಿಗೆ ಈ ಹುಟ್ಟುಹಬ್ಬ ಮತ್ತಷ್ಟು ವಿಶೇಷವೆನಿಸಿದೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಬ್ರೇಕಪ್ ವದಂತಿಗಳಿಗೆ ಸ್ವತಃ ಅವರ ಗೆಳೆಯ, ಯುಕೆ ಮೂಲದ ಉದ್ಯಮಿ ಕಬೀರ್ ಬಾಹಿಯಾ ನೀಡಿರುವ ವಿಶೇಷ ಶುಭಾಶಯ ಪೂರ್ಣವಿರಾಮ ಇಟ್ಟಿದೆ.
ಕೃತಿ ಸನೋನ್ ಹುಟ್ಟುಹಬ್ಬದ ಮರುದಿನ ಕಬೀರ್ ಬಾಹಿಯಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಟಿಯೊಂದಿಗಿನ ಆಪ್ತ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೃತಿ ಜೊತೆಗಿನ ಸೆಲ್ಫಿ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಅವರು, ಮತ್ತೊಂದು ಫೋಟೋದಲ್ಲಿ ಇಬ್ಬರೂ ಬೋಟ್ ಒಂದರಲ್ಲಿ ಜಂಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಕೃತಿ ಸನೋನ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮರುಹಂಚಿಕೊಳ್ಳುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕಬೀರ್ ಬಾಹಿಯಾ ಅವರು ಮತ್ತೊಬ್ಬ ಮಹಿಳೆಯೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಆಧರಿಸಿ ಕೃತಿ ಮತ್ತು ಕಬೀರ್ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಗಳು ಹರಡಿದ್ದವು. ಆದರೆ ಕಬೀರ್ ಅವರ ಆಪ್ತ ಮೂಲಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಫೋಟೋದಲ್ಲಿದ್ದ ಮಹಿಳೆ ಕಬೀರ್ ಅವರ ಕುಟುಂಬದ ಆಪ್ತರಾಗಿದ್ದು, ಸಹೋದರಿಯ ಸಮಾನ ಎಂದು ತಿಳಿಸಿದ್ದಾರೆ. ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಕೃತಿ ಸನೋನ್ ಕೂಡ ಇತ್ತೀಚೆಗೆ ಈ ವರ್ಷದ ನೆನಪುಗಳ ಫೋಟೋ ಸರಣಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಕಬೀರ್ ಜೊತೆಗಿರುವ ಚಿತ್ರವೂ ಸೇರಿತ್ತು. ಇದೀಗ ಕಬೀರ್ ಅವರ ಜನ್ಮದಿನದ ಶುಭಾಶಯದ ಪೋಸ್ಟ್ ಹಾಗೂ ಕೃತಿ ಅವರ ಪ್ರತಿಕ್ರಿಯೆ ನೋಡಿದ ಅಭಿಮಾನಿಗಳು, ಇಬ್ಬರ ನಡುವಿನ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

