ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ‘ಜನನಾಯಕ’ ಚಿತ್ರಕ್ಕೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ವಿಳಂಬದ ಕಾರಣದಿಂದಾಗಿ ಸಾಕಷ್ಟು ತಡವಾಗಿ ಜುಲೈ 23 ರಂದು ತೆರೆಕಂಡ ಈ ಚಿತ್ರ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಮೂರನೇ ದಿನದ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಆದಾಗ್ಯೂ, ಬಾಕ್ಸ್ ಆಫೀಸ್ ವಿಶ್ಲೇಷಣೆಗಳ ಪ್ರಕಾರ ಚಿತ್ರವು ಭಾರತದಲ್ಲೇ ಮೂರನೇ ದಿನ ಸುಮಾರು 28.50 ಕೋಟಿ ರೂಪಾಯಿ ನಿವ್ವಳ ಆದಾಯ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 92.35 ಕೋಟಿ ರೂಪಾಯಿಗೆ ತಲುಪಿದ್ದು, ಗ್ರಸ್ ಸಂಗ್ರಹ 108.34 ಕೋಟಿ ರೂಪಾಯಿಯಾಗಿದೆ.
ವಿದೇಶಿ ಮಾರುಕಟ್ಟೆಯಲ್ಲೂ ವಿಜಯ್ ಅವರ ಹವಾ ಮುಂದುವರಿದಿದ್ದು, ಮೂರನೇ ದಿನವೇ 20 ಕೋಟಿ ರೂಪಾಯಿ ಗ್ರಸ್ ಕಲೆಕ್ಷನ್ ಮಾಡಿದೆ. ಇದರಿಂದಾಗಿ ವಿದೇಶಗಳಲ್ಲಿ ಒಟ್ಟು ಗಳಿಕೆ 63.50 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶ ಹಾಗೂ ವಿದೇಶಿ ಗಳಿಕೆಯನ್ನು ಒಟ್ಟಾಗಿ ಲೆಕ್ಕ ಹಾಕಿದರೆ, ‘ಜನನಾಯಕ’ ಸಿನಿಮಾ ಬಿಡುಗಡೆಯಾದ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ 171.84 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಶೀಘ್ರದಲ್ಲೇ 200 ಕೋಟಿ ರೂಪಾಯಿ ಗಡಿ ದಾಟುವತ್ತ ಹೆಜ್ಜೆ ಹಾಕಿದೆ.
ಭಾಷಾವಾರು ಗಳಿಕೆಯ ವಿಷಯಕ್ಕೆ ಬಂದರೆ, ತಮಿಳು ಆವೃತ್ತಿಯಿಂದಲೇ ಗರಿಷ್ಠ ಅಂದರೆ 24.40 ಕೋಟಿ ರೂಪಾಯಿ ಹರಿದುಬಂದಿದೆ. ಉಳಿದಂತೆ ಹಿಂದಿ ಆವೃತ್ತಿ 2.70 ಕೋಟಿ ಹಾಗೂ ತೆಲುಗು ಆವೃತ್ತಿ 1.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಚಿತ್ರದ ನಿರ್ಮಾಣ ವೆಚ್ಚದ ಬಗ್ಗೆ ನಿರ್ಮಾಪಕರು ಅಧಿಕೃತವಾಗಿ ಎಲ್ಲೂ ಹಂಚಿಕೊಂಡಿಲ್ಲವಾದರೂ, ಮೂಲಗಳ ಪ್ರಕಾರ ಈ ಭಾರಿ ಬಜೆಟ್ ಸಿನಿಮಾವನ್ನು ಸುಮಾರು 300 ರಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಆರಂಭಿಕ ದಿನಕ್ಕೆ ಹೋಲಿಸಿದರೆ ಮೂರನೇ ದಿನದ ಗಳಿಕೆಯಲ್ಲಿ ಸಣ್ಣ ಇಳಿಕೆ ಕಂಡುಬಂದಿದ್ದರೂ, ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ.
ಎಚ್. ವಿನೋತ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಿದ್ದು, ಕಥೆಯಲ್ಲಿರುವ ರಾಜಕೀಯ ಅಂಶ ಹಾಗೂ ವಿಜಯ್ ಅವರ ಮಾಸ್ ಶೈಲಿ ಅಭಿಮಾನಿಗಳಿಗೆ ಇಷ್ಟವಾಗಿದೆ. ನಟನೆಯಿಂದ ದೂರವಾಗಲಿರುವ ವಿಜಯ್ ಅವರ ಕೊನೆಯ ಚಿತ್ರ ಇದಾಗಿರುವುದರಿಂದ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

