HomeLatest Newsಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಮರುಜೀವ: ಪರಮೇಶ್ವರ್

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಮರುಜೀವ: ಪರಮೇಶ್ವರ್

ಬೆಂಗಳೂರು-ದೇಶದಲ್ಲಿರುವ ವೈಮಾನಿಕ ತರಬೇತಿ ಶಾಲೆಗಳಲ್ಲಿ ಅತ್ಯಂತ ಹಳೆಯದಾಗಿರುವ ಹಾಗೂ ರಾಜ್ಯ ಸರ್ಕಾರ ನಡೆಸುವ ಅಗ್ರಮಾನ್ಯ ವೈಮಾನಿಕ ತರಬೇತಿ ಶಾಲೆಯಾಗಿರುವ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ (GFTS) ಮರುಜೀವ ನೀಡಿ ಮತ್ತೇ ಪ್ರಸ್ತುತ ಸಾಲಿನಲ್ಲಿ ಪುನಾರಾರಂಭ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು, ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ಈ ಕುರಿತಂತೆ ಇಂದು ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪರಿಶೀಲನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡ ಮಕ್ಕಳು ಹಾಗೂ ಮಧ್ಯಮ ವರ್ಗದ ಮಕ್ಕಳ ವೈಮಾನಿಕ ಕನಸನ್ನು ನನಸು ಮಾಡಲು ಸರ್ಕಾರದ ವತಿಯಿಂದ 1940ರಲ್ಲಿ ಪ್ರಾರಂಭವಾದ ಈ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ (GFTS) ಪರವಾನಗಿಯು ಡಿಸೆಂಬರ್ 2023ರಲ್ಲಿ ಕಾರಣಾಂತರಗಳಿಂದ ರದ್ದಾಗಿತ್ತು. ಇದೀಗ ಕೇಂದ್ರ ಸರ್ಕಾರದ DGCA ವತಿಯಿಂದ 16.07.2026 ರಿಂದ 15.07.2031 ರವರೆಗೆ (5 ವರ್ಷಗಳು) ಪರವಾನಿಗೆ ದೊರಕಿದ್ದು, ಶಾಲೆಯನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ನವೀಕರಿಸಲಾಗಿದೆ ಎಂದರು.

ಸದರಿ ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯಲ್ಲಿ ಒಬ್ಬರು ಮುಖ್ಯ ವಿಮಾನ ಬೋಧಕರು (CFI) ಹಾಗೂ ಇಬ್ಬರು ವಿಮಾನ ಬೋಧಕರ ನೇಮಕವಾಗಿದೆ. ಇಲ್ಲಿ ಒಟ್ಟು 5 ವಿಮಾನಗಳಿದ್ದು, ಅವುಗಳಲ್ಲಿ 3 ವಿಮಾನಗಳು (Cessna 172P, Cessna 172S, Tecnam P 2006T) ಪೂರ್ಣ ಹಾರಾಟ ಸುಸ್ಥಿತಿಯಲ್ಲಿವೆ. ಉಳಿದೆರೆಡು ವಿಮಾನಗಳನ್ನು ತುರ್ತಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದಿನಂತೆ PPL (ಖಾಸಗಿ ಪೈಲಟ್), CPL (ವಾಣಿಜ್ಯ ಪೈಲಟ್) ಹಾಗೂ Multi Engine Endorsement ತರಬೇತಿ ಮುಂದುವರಿಯಲಿದೆ. ಒಟ್ಟು 30 ವಿದ್ಯಾರ್ಥಿಗಳ ತರಬೇತಿ ಸಾಮರ್ಥ್ಯವಿದ್ದು, ಹೊಸ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ಪೈಲಟ್ ತರಬೇತಿಗೆ ಹೆಚ್ಚುತ್ತಿರುವ ಬೇಡಿಕೆ

ದೇಶದದಲ್ಲಿ ವೈಮಾನಿಕ ಸೇವೆ ನೀಡುತ್ತಿರುವ ಹಲವಾರು ಖಾಸಗಿ ಸಂಸ್ಥೆಗಳು ಸಾವಿರಾರು ಹೊಸ ವಿಮಾನಗಳ ಖರೀದಿಗೆ ಮುಂದಾಗಿವೆ, ಭವಿಷ್ಯದಲ್ಲಿ 35000 ಕ್ಕೂ ಹೆಚ್ಚು ಪೈಲೆಟ್ ಗಳ ಬೇಡಿಕೆ ಸೃಷ್ಟಿಯಾಗಲಿದೆ ಎಂದು ತಜ್ಞರು ತಿಳಿಸಿರುತ್ತಾರೆ. ಬೇಡಿಕೆಗೆ ತಕ್ಕಂತೆ ಖಾಸಗಿ ವೈಮಾನಿಕ ತರಬೇತಿ ಶಾಲೆಗಳಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕೋಟಿಗಟ್ಟಲೇ ಹಣ ನೀಡಲು ಸಾಧ್ಯವಾಗುವುದಿಲ್ಲ, ಇದನ್ನು ಮನಗಂಡು ಲಕ್ಷಗಳಲ್ಲಿ ಮಧ್ಯಮ ವರ್ಗದ ಮಕ್ಕಳಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.

DGCA ಅಧಿಕಾರಿಗಳು ರನ್ವೇ ಸುರಕ್ಷತೆ ಹಾಗೂ ಹಾರಾಟ ಪರೀಕ್ಷೆ ನಡೆಸಿ ತೃಪ್ತಿಕರವಾಗಿರುವುದನ್ನು ದೃಢಪಡಿಸಿರುವುದರಿಂದ ತರಬೇತಿಯನ್ನು ಸಂಪೂರ್ಣ ಸುರಕ್ಷಿತವಾಗಿ ನಡೆಸಲಾಗುತ್ತದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆವತಿಯಿಂದ ವಿದ್ಯಾರ್ಥಿವೇತನ ಸೌಲಭ್ಯ ಸಹ ಇರುತ್ತದೆ ಎಂದು ತಿಳಿಸಿದರು.

ಈ ಶಾಲೆಯ ಸುತ್ತಲಿನ 2.7 ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ 45 ಮೀಟರ್ ಎತ್ತರಕ್ಕಿಂತ ಹೆಚ್ಚಿನ ಎತ್ತರದ ಕಟ್ಟಡಗಳನ್ನು ಕಟ್ಟಲು ಅವಕಾಶವಿರುವುದಿಲ್ಲ, ಶಾಲೆಯ ಪಕ್ಕದಲ್ಲಿರುವ 10 ಎಕ್ಕರೆ ಭೂಮಿಯನ್ನು ಸುಪರ್ದಿಗೆ ತೆಗೆದುಕೊಂಡಲ್ಲಿ ಮತ್ತಷ್ಟು ವಿಸ್ತರಿಸಬಹುದಾಗಿದೆ ಎನ್ನುವ ಉದ್ದೇಶದಿಂದ ಈಗಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಮೈಸೂರು ಮತ್ತು ಹಾಸನ ವಿಮಾನ ನಿಲ್ದಾಣಗಳನ್ನು ತರಬೇತಿಗೆ ಬಳಸಿಕೊಳ್ಳಲು ಯೋಜಿಸಲಾಗುತ್ತಿದ್ದು, ಈ ಸಂಸ್ಥೆ ಮುಚ್ಚುವ ಯಾವುದೇ ಉದ್ದೇಶವಿಲ್ಲ ಎಂದರು.

ಇಲಾಖೆಗೆ ಮರುನಾಮಕರಣ ಪ್ರಸ್ತಾವನೆ

*ಮರುನಾಮಕರಣ:*

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಉದ್ದೇಶದಿಂದ ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ನಾಗರೀಕ ವಿಮಾನಯಾನ ಇಲಾಖೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

*ಪೋಲ್ ವಾಲ್ಟ್ ಕ್ರೀಡಾಪಟುವಿಗೆ 3 ಪೋಲ್ ಹಾಗೂ 5 ಲಕ್ಷ ಸಹಾಯ ಧನ :*

ಸಿಂಧುಶ್ರೀ ಗಣೇಶ್‌ಗೆ ಪೋಲ್ ಮತ್ತು ಸಹಾಯ ಧನ

ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಪಾನ್ ನಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಸ್ಪರ್ಧೆಗೆ ತಯಾರಿ ನಡೆಸಿರುವ ಶಿವಮೊಗ್ಗ ಮೂಲದ ಸಿಂಧುಶ್ರೀ ಗಣೇಶ್ ಅವರಿಗೆ ಇದೇ ಸಂದರ್ಭದಲ್ಲಿ ತಲಾ ಎರಡೂವರೆ ಲಕ್ಷ ರೂ ಬೆಲೆ ಬಾಳುವ ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್ ಗಳನ್ನು ನೀಡಿ ಗೌರವಿಸಿದರು.

ಶಿವಮೊಗ್ಗ ಮೂಲದ ಸಿಂಧುಶ್ರೀ ಬಹಳ ಬಡತನದಿಂದ ಬಂದ ಹೆಣ್ಣು ಮಗುವೊಂದನ್ನು ಇಂದು ಕ್ರೀಡಾ ಇಲಾಖೆಯ ಮೂಲಕ ಅಂತರರಾಷ್ಟ್ರೀಯ ಕ್ರೀಡಾಪಟುವನ್ನಾಗಿ ತಯಾರಿ ಮಾಡಲಾಗಿದೆ, ಪೋಲ್ ವಾಲ್ಟ್ ಕ್ರೀಡೆಯಲ್ಲಿ 4.02 ಮೀಟರ್ ಎತ್ತರ ಕ್ಲೀಯರ್ ಮಾಡುವ ಮೂಲಕ, ಜಪಾನ್ ನಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಗೆ ಕ್ವಾಲಿಪೈ ಆಗಿದ್ದಾರೆ, ಕ್ರೀಡಾ ಇಲಾಖೆವತಿಯಿಂದ ಅಗತ್ಯವಿರುವ ಅಂತರರಾಷ್ಟ್ರೀಯ ಗುಣಮಟ್ಟದ 3 ಕೋಲುಗಳನ್ನು ವಿದೇಶದಿಂದ ತರಿಸಿ ಕೊಡಲಾಗಿದೆ. ಇದರೊಂದಿಗೆ 5 ಲಕ್ಷ ಸಹಾಯ ಧನ ಒದಗಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಮ್ ಎನ್ ಅನುಚೇತ್ ಹಾಗೂ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪ್ರಾಂಶುಪಾಲ ಬಸವರಾಜ್ ಅವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular