ನವದೆಹಲಿ: ದೇಶಾದ್ಯಂತ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಮುಂದುವರಿಯುತ್ತಿರುವ ನಡುವೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆಯೇ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಹಾಗೂ ದಂಡವನ್ನು ಹೆಚ್ಚಿಸುವ ಜೊತೆಗೆ, ತ್ವರಿತ ವಿಚಾರಣೆಗೆ ಫಾಸ್ಟ್-ಟ್ರಾಕ್ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ಕಾಯ್ದೆ-2024ಕ್ಕೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದೆ.ಮೂಲಗಳ ಪ್ರಕಾರ, ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ಕಾಯ್ದೆ, 2024ಕ್ಕೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿಗಳಿಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ವ್ಯಕ್ತಿಗಳು ಅಥವಾ ಸಂಘಟಿತ ಜಾಲಗಳಿಗೆ 5ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಕೋಟಿವರೆಗೆ ದಂಡ ವಿಧಿಸುವಂತೆ ಕಾನೂನಿನಲ್ಲಿ ಕಠಿಣ ತಿದ್ದುಪಡಿಗಳನ್ನು ತರಲು ಸಿದ್ಧತೆ ನಡೆಸಿದೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟುಮಾಡುತ್ತಿರುವ ಈ ಗಂಭೀರ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಂಸತ್ತಿನಲ್ಲಿ ಹೊಸ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಇಂದು ಸಂಜೆ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವಿತ ತಿದ್ದುಪಡಿಗಳಿಗೆ ಅನುಮೋದನೆ ದೊರೆತ ಬಳಿಕ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಈ ಕಾನೂನಿನ ವ್ಯಾಪ್ತಿಗೆ ಬರುವ ಎಲ್ಲ ಅಪರಾಧಗಳನ್ನು ಜಾಮೀನು ಸಿಗದ (Non-Bailable) ಅಪರಾಧಗಳಾಗಿ ಪರಿಗಣಿಸಲಾಗುತ್ತದೆ. ಅಂದರೆ, ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುವುದಿಲ್ಲ. ಪರೀಕ್ಷೆಗಳನ್ನು ನಡೆಸುವ ಖಾಸಗಿ ಸಂಸ್ಥೆಗಳು ಅಥವಾ ಸೇವಾ ಪೂರೈಕೆದಾರರು ಅಕ್ರಮಗಳಲ್ಲಿ ಭಾಗಿಯಾಗಿದ್ದರೆ, ಅವರಿಗೆ ₹1 ಕೋಟಿ ದಂಡ ವಿಧಿಸುವುದರ ಜೊತೆಗೆ ಅವರ ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.
ಆದರೆ, ಈ ಕಾನೂನು ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಜಾಲಗಳು, ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವ ಸಂಘಟಿತ ಗುಂಪುಗಳು ಹಾಗೂ ಮಾಫಿಯಾಗಳ ವಿರುದ್ಧವೇ ಕ್ರಮ ಕೈಗೊಳ್ಳಲು ಉದ್ದೇಶಿತವಾಗಿದೆ. ನಿರಪರಾಧ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ವಿಶೇಷ ರಕ್ಷಣೆಯನ್ನೂ ಈ ಕಾನೂನಿನಲ್ಲಿ ಒದಗಿಸಲಾಗುತ್ತಿದೆ.
ಇನ್ನೊಂದೆಡೆ, ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ಬಳಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು, ಪರೀಕ್ಷೆ ರದ್ದತಿಯಿಂದ ನಷ್ಟ ಅನುಭವಿಸಿದ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಬಂಧನಕ್ಕೊಳಗಾದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಮುಖ ತಿದ್ದುಪಡಿಗಳು ಏನು ?
• ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ಫಾಸ್ಟ್-ಟ್ರಾಕ್ ನ್ಯಾಯಾಲಯಗಳ ಸ್ಥಾಪನೆಗೆ ಕಾನೂನು ಅವಕಾಶ.
• ಆರೋಪಿಗಳಿಗೆ ವಿಧಿಸಲಾಗುವ ಜೈಲು ಶಿಕ್ಷೆಯ ಅವಧಿ ಹೆಚ್ಚಳ.
• ಹಣದ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಪ್ರಸ್ತಾವನೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರವೇ ಪೇಪರ್ ಲೀಕ್ ಪ್ರಕರಣಗಳಿಗೆ ಫಾಸ್ಟ್-ಟ್ರಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದರು.
ಈಗಿರುವ ಕಾನೂನು ಏನು ಹೇಳುತ್ತದೆ?
ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪ್ರಕಾರ:
• ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದವರಿಗೆ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹10 ಲಕ್ಷದವರೆಗೆ ದಂಡ ವಿಧಿಸಬಹುದು.
• ಅಪರಾಧದ ಮಾಹಿತಿ ನೀಡದ ಸೇವಾ ಪೂರೈಕೆದಾರರಿಗೆ ₹1 ಕೋಟಿವರೆಗೆ ದಂಡ ವಿಧಿಸುವ ಅವಕಾಶವಿದೆ.
• ಸಂಘಟಿತ ಅಪರಾಧ ಪ್ರಕರಣಗಳಲ್ಲಿ 5ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ₹1 ಕೋಟಿ ದಂಡ ವಿಧಿಸಲಾಗುತ್ತದೆ.
ಸೋಮವಾರ ಲೋಕಸಭೆಯಲ್ಲಿ ಮಸೂದೆ?
ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ, ತಿದ್ದುಪಡಿ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಆರೋಪ
ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಳೆದ 10 ವರ್ಷಗಳಲ್ಲಿ ಸುಮಾರು 150 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದರೂ, ಒಂದೇ ಒಂದು ಶಿಕ್ಷೆಯಾಗಿಲ್ಲ ಎಂದು ಆರೋಪಿಸಿದ್ದರು.
ಪ್ರಧಾನಿ ಮೋದಿ ಭರವಸೆ
ಗುರುವಾರ ರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ಸಾಮಾನ್ಯ ವಿಷಯವಲ್ಲ; ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ನೋವುಂಟುಮಾಡಿದೆ ಎಂದು ಹೇಳಿದರು.”ದೋಷಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗದಂತೆ ತಕ್ಷಣವೇ ಪರೀಕ್ಷೆ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗಾಗಿ ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿದೆ,” ಎಂದು ಪ್ರಧಾನಿ ಹೇಳಿದರು.ಅವರು, ಫಾಸ್ಟ್-ಟ್ರಾಕ್ ನ್ಯಾಯಾಲಯಗಳ ಸ್ಥಾಪನೆಗೆ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದು, ಸಚಿವ ಸಂಪುಟದ ಅನುಮೋದನೆಯ ಬಳಿಕ ಸಂಸತ್ತಿನ ಎರಡನೇ ವಾರದಿಂದಲೇ ಮಸೂದೆಯನ್ನು ಶೀಘ್ರದಲ್ಲಿ ಅಂಗೀಕರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿಯ ಪ್ರತಿಕ್ರಿಯೆ
ಪ್ರಧಾನಿ ಮೋದಿಯ ವಿಡಿಯೋ ಸಂದೇಶಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಇನ್ನೂ ಆಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

