ಬೆಂಗಳೂರು: ಸಿಲಿಕಾನ್ ಸಿಟಿ ಇತಿಹಾಸದಲ್ಲೇ ಅತ್ಯಂತ ಎತ್ತರದ ಅಪಾರ್ಟ್ಮೆಂಟ್ ಕಟ್ಟಡವೊಂದನ್ನು ನೆಲಸಮಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಭೂತಪೂರ್ವ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನ ಕೂಡ್ಲು ಬಳಿ ನಿರ್ಮಾಣವಾಗಿರುವ ಬರೋಬ್ಬರಿ 18 ಮಹಡಿಗಳ ಗಗನಚುಂಬಿ ಕಟ್ಟಡವು ಅವೈಜ್ಞಾನಿಕ ನಿರ್ಮಾಣ ಹಾಗೂ ತಾಂತ್ರಿಕ ಲೋಪದಿಂದಾಗಿ ವಾಲಿದ್ದು, ಉದ್ಘಾಟನೆಗೂ ಮುನ್ನವೇ ನೆಲಕಚ್ಚಲು ಸಿದ್ಧವಾಗಿದೆ.
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಬೃಹತ್ ಅಪಾರ್ಟ್ಮೆಂಟ್, ಭವಿಷ್ಯದಲ್ಲಿ ಭಾರಿ ದುರಂತಕ್ಕೆ ಕಾರಣವಾಗುವ ಭೀತಿ ಎದುರಾಗಿದ್ದರಿಂದ ಅಧಿಕಾರಿಗಳು ಈ ಕಠಿಣ ನಿರ್ಧಾರ ತಳೆದಿದ್ದಾರೆ.
ಕಟ್ಟಡಕ್ಕೇಕೆ ಬಂತು ಈ ಗತಿ? ಮಣ್ಣು ಪರೀಕ್ಷೆಯಲ್ಲೇ ಯಡವಟ್ಟು
ಎಸ್ಎನ್ಎನ್ ರಾಜ್ ಕಾರ್ಪ್ ಒಡೆತನದ ಈ 18 ಅಂತಸ್ತಿನ ಕಟ್ಟಡದಲ್ಲಿ ಸ್ಟ್ರಕ್ಚರಲ್ ಡ್ಯಾಮೇಜ್ (ರಚನಾತ್ಮಕ ಹಾನಿ) ಉಂಟಾಗಿದ್ದು, ಕಟ್ಟಡವು ಪ್ರಸ್ತುತ ಒಂದು ಬದಿಗೆ ವಾಲಿದೆ.
ನಿರ್ಮಾಣದ ವೇಳೆ ಮಣ್ಣು ಪರೀಕ್ಷೆಯಲ್ಲಿ ಆದ ಭಾರೀ ಯಡವಟ್ಟೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಅದೃಷ್ಟವಶಾತ್, ಕಟ್ಟಡವನ್ನು ಇನ್ನೂ ಸಾರ್ವಜನಿಕರ ವಾಸಕ್ಕೆ ಮುಕ್ತಗೊಳಿಸದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಂಪನಿಯೇ ಸ್ವತಃ ಈ ದೋಷವನ್ನು ಪತ್ತೆಹಚ್ಚಿ ಜಿಬಿಎ ಹಾಗೂ ರೇರಾ (RERA) ಗಮನಕ್ಕೆ ತಂದಿದೆ.
ಜಿಬಿಎ ಮುಖ್ಯ ಆಯುಕ್ತರ ಸಭೆ: ವೆಚ್ಚ ಭರಿಸಲು ಕಟ್ಟಡ ಮಾಲೀಕರು ಸಮ್ಮತಿ
ಕಟ್ಟಡದ ಭದ್ರತೆ ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಮಾಲೀಕರು, ಪೊಲೀಸ್ ಅಧಿಕಾರಿಗಳು, ದಕ್ಷಿಣ ನಗರ ಪಾಲಿಕೆ ಇಂಜಿನಿಯರ್ಗಳು ಹಾಗೂ ನಗರ ಯೋಜನಾ ತಜ್ಞರು ಭಾಗವಹಿಸಿದ್ದರು.
ಸಭೆಯ ತೀರ್ಮಾನದಂತೆ ಕಟ್ಟಡ ನೆಲಸಮಕ್ಕೆ ಮಾಲೀಕರು ಸಮ್ಮತಿಸಿದ್ದು, ತೆರವು ಕಾರ್ಯಾಚರಣೆಗೆ ತಗಲುವ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಎಸ್ಎನ್ಎನ್ ರಾಜ್ ಕಾರ್ಪ್ ಆಡಳಿತ ಮಂಡಳಿ ಒಪ್ಪಿಕೊಂಡಿದೆ.
ಕೊಚ್ಚಿ ಮಾದರಿಯಲ್ಲಿ ನಿಯಂತ್ರಿತ ಸ್ಫೋಟ
ಕೆಲ ವರ್ಷಗಳ ಹಿಂದೆ ಕೇರಳದ ಕೊಚ್ಚಿಯ ಮರಡ್ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 4 ಗಗನಚುಂಬಿ ಕಟ್ಟಡಗಳನ್ನು ನಿಯಂತ್ರಿತ ಸ್ಫೋಟಕಗಳನ್ನು ಬಳಸಿ ಅಕ್ಕಪಕ್ಕದ ಕಟ್ಟಡಗಳಿಗೆ ಚೂರು ಹಾನಿಯಾಗದಂತೆ ಯಶಸ್ವಿಯಾಗಿ ಧ್ವಂಸಗೊಳಿಸಲಾಗಿತ್ತು.
ಇದೇ ಸುಧಾರಿತ ಕೇರಳ ಮಾದರಿಯ ತಂತ್ರಜ್ಞಾನವನ್ನು ಬೆಂಗಳೂರಿನಲ್ಲೂ ಬಳಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ 18 ಮಹಡಿಯ ಕಟ್ಟಡವನ್ನು ನೆಲಸಮಗೊಳಿಸಲು ಜಿಬಿಎ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

