ಬೆಂಗಳೂರು,-ಕರ್ನಾಟಕವನ್ನು ಜಾಗತಿಕ ಮಟ್ಟದ ಅಗ್ರಗಣ್ಯ ಪ್ರವಾಸಿ ತಾಣವನ್ನಾಗಿ ರೂಪಿಸಲು ರಾಜ್ಯ ಸರ್ಕಾರವು ಸಾರಿಗೆ- ಸಂಪರ್ಕ ವ್ಯವಸ್ಥೆ ಸುಧಾರಣೆ, ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸುವುದು, ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದರ ಮೇಲೆ ಗಮನ ಹರಿಸಲಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಇಂದು ನಗರದಲ್ಲಿ ಪ್ರಾರಂಭವಾದ ಮೂರು ದಿನಗಳ 26 ನೇ ‘ಇಂಡಿಯನ್ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್’ (IITM) ಉದ್ಘಾಟಿಸಿ ಮಾತನಾಡಿದ ಅವರು ಭಾರತ ಹಾಗೂ ವಿದೇಶಗಳಿಂದ ಆಗಮಿಸಿದ್ದ ಪ್ರವಾಸೋದ್ಯಮ ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದ ಜಾರ್ಜ್, ಸುಲಭ ಸಂಚಾರ ವ್ಯವಸ್ಥೆಯೇ ಪ್ರವಾಸೋದ್ಯಮ ಅಭಿವೃದ್ಧಿಯ ಅಡಿಪಾಯ ಎಂದರು.
ಪ್ರವಾಸಿಗರು, ತಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನು ಸುಲಭವಾಗಿ ತಲುಪಲು ಸಾಧ್ಯವಾದಾಗ ಮಾತ್ರ ಅಲ್ಲಿಗೆ ಭೇಟಿ ನೀಡುತ್ತಾರೆ. ಸಾರಿಗೆ, ಸಂಪರ್ಕ ಮತ್ತು ಮೂಲಸೌಕರ್ಯ ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆ ಜಾಲಗಳನ್ನು ಸರಕಾರ ಮೇಲ್ದರ್ಜೆಗೇರಿಸುತ್ತಿದೆ. ರಾಜ್ಯಾದ್ಯಂತ ವಿಮಾನ ನಿಲ್ದಾಣ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು (last-mile connectivity) ಸಬಲಗೊಳಿಸಲು ಸರಕಾರ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ತಿಳಿಸಿದರು.
ರಾಜ್ಯದ ಸುಂದರವಾದ ಕಡಲತೀರ ಅಥವಾ ದೂರದ ಗಿರಿ ತಾಣಗಳನ್ನು ತಲುಪಲು ಪ್ರವಾಸಿಗರಿಗೆ ಸುಲಭ ಮತ್ತು ಸುಖಕರ ಅನುಭವವಾಗಬೇಕು ಇದು ಸರಕಾರದ ಗುರಿ ಎಂದು ಅವರು ಬಣ್ಣಿಸಿದರು.
ಸಾರಿಗೆ- ಸಂಪರ್ಕ ಜೊತೆಗೆ, ಪ್ರವಾಸೋದ್ಯಮ ತಾಣಗಳಲ್ಲಿ ನಾವು ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ಇರುವ ಪ್ರತ್ಯೇಕ ಕಡಲತೀರಗಳಿಗೆ ವಿಶೇಷ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮತ್ತು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಿರ್ವಹಿಸುವ ಸ್ಥಳಗಳಲ್ಲಿ ವಸತಿ, ನೈರ್ಮಲ್ಯ ಮತ್ತು ಪ್ರವಾಸಿಗರ ಮಾಹಿತಿ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ಅವರು ಸಚಿವರು ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮದ ಹೆಗ್ಗಳಿಕೆ ಇಲ್ಲಿನ ವೈವಿಧ್ಯಮಯ ಪ್ರವಾಸಿ ತಾಣಗಳು. ನಮ್ಮಲ್ಲಿ ಹಂಪಿ ಮತ್ತು ಮೈಸೂರಿನಂತಹ ವಿಶ್ವದರ್ಜೆಯ ಪಾರಂಪರಿಕ ತಾಣಗಳಿವೆ. ಬಂಡೀಪುರ ಮತ್ತು ಕಬಿನಿಯಲ್ಲಿ ಸಮೃದ್ಧ ವನ್ಯಜೀವಿ ವೈಭವವಿದೆ. ಪಶ್ಚಿಮ ಘಟ್ಟಗಳಲ್ಲಿ ಸುಂದರವಾದ ಗಿರಿಧಾಮಗಳು ಮತ್ತು ಅತಿ ಉದ್ದವಾದ ಮನೋಹರ ಕರಾವಳಿ ತೀರವಿದೆ. ಆದರೆ, ಈ ಸಂಪನ್ಮೂಲಗಳನ್ನು ಹೊಂದಿರುವುದಷ್ಟೇ ಸಾಲದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ನಾವು ಇವುಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡಬೇಕು ಮತ್ತು ಉತ್ತಮವಾಗಿ ಪ್ರಸ್ತುತಪಡಿಸಬೇಕು ಎಂದರು.
ಟ್ರಾವೆಲ್ ಮಾರ್ಟ್ಗಳು, ರೋಡ್ಶೋಗಳು ಮತ್ತು ಉದ್ಯಮ ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದು, ಪ್ರವಾಸೋದ್ಯಮ ಕ್ಷೇತ್ರದ ಜೊತೆಗೆ ಸದೃಢ ಪಾಲುದಾರಿಕೆ ಜೊತೆಗೆವಿಶ್ವದೆಲ್ಲೆಡೆ ರಾಜ್ಯದ ಪ್ರವಾಸಿ ತಾಣಗಳನ್ನು ಪ್ರದರ್ಶಿಸಲು ನೆರವಾಗುತ್ತಿದೆ ಎಂದು ಸಚಿವರು ಹೇಳಿದರು.
ದೆಹಲಿ, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಬರೋಡಾ, ಸೂರತ್, ಭುವನೇಶ್ವರ, ಭೋಪಾಲ್, ಇಂದೋರ್, ಜೈಪುರ ಮತ್ತು ಚಂಡೀಗಢ ಸೇರಿದಂತೆ ಪ್ರಮುಖ ದೇಶೀಯ ಮಾರುಕಟ್ಟೆಗಳಲ್ಲಿ ಇಲಾಖೆಯು ಪ್ರಚಾರದ ರೋಡ್ಶೋಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ, ಅಮೆರಿಕ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಪ್ರಮುಖ ಪ್ರವಾಸಿ ಮಾರುಕಟ್ಟೆಗಳಲ್ಲಿ ಈ ತೆರನಾದ ಪ್ರವಾಸೋದ್ಯಮ ಅಭಿಯಾನಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರವಾಸೋದ್ಯಮದ ಶ್ರೀಮಂತಿಕೆಯನ್ನು ಪ್ರಸ್ತುತ ಪಡಿಸುತ್ತೇವೆ. ಸಂಸ್ಕೃತಿ, ಪರಂಪರೆ, ಪ್ರಕೃತಿ, ಕ್ಷೇಮ (ವೆಲ್ನೆಸ್) ಮತ್ತು ಅನುಭವ ಆಧಾರಿತ ಪ್ರವಾಸೋದ್ಯಮಕ್ಕೆ ಕರ್ನಾಟಕವನ್ನು ನೆಚ್ಚಿನ ತಾಣವನ್ನಾಗಿ ಮಾಡುವುದೇ ನಮ್ಮ ಉದ್ದೇಶ ಎಂದರು.
ಬ್ರ್ಯಾಂಡ್ ಕರ್ನಾಟಕ’ ಮತ್ತು ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಸಚಿವರು, ಕರ್ನಾಟಕವನ್ನು ಜಗತ್ತಿಗೆ ಪರಿಚಯಿಸಲು ಬಯಸುವ ಪ್ರತಿಯೊಬ್ಬರಿಗೂ ನಾವು ವಿಶ್ವಾಸಾರ್ಹ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ‘ಬ್ರ್ಯಾಂಡ್ ಕರ್ನಾಟಕ’ ಮತ್ತು ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಿಸುವ ಅಗತ್ಯವನ್ನು ನಮ್ಮ ಮುಖ್ಯಮಂತ್ರಿಗಳು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮತ್ತು ನಮ್ಮ ರಾಜ್ಯವನ್ನು ವಿಶ್ವದ ಉನ್ನತ ಪ್ರವಾಸಿ ತಾಣವಾಗಿ ಪ್ರಸ್ತುತಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೆ ಸಂದರ್ಭದಲ್ಲಿ ಸಚಿವ ಜಾರ್ಜ್ ಅವರು , ಸರ್ಕಾರವು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಬಲ್ಲ ‘ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026’ ಅನ್ನು ಅಂತಿಮಗೊಳಿಸುವುದಾಗಿ ತಿಳಿಸಿದರು.
ನಾವು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ವಿಶೇಷ ಗಮನ ನೀಡುತ್ತಿದ್ದೇವೆ. ಕರ್ನಾಟಕವು ೩೪೩.೩೦ ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿದ್ದರೂ, ಅದರ ನೈಜ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನೂ ಪೂರ್ಣವಾಗಿ ಬಳಸಿಕೊಂಡಿಲ್ಲ. ಈ ಹೊಸ ನೀತಿಯ ಮೂಲಕ, ಈ ಜಿಲ್ಲೆಗಳಲ್ಲಿ ಬೀಚ್ ಪ್ರವಾಸೋದ್ಯಮ, ಕ್ರೂಸ್ ಪ್ರವಾಸೋದ್ಯಮ, ಜಲ ಕ್ರೀಡೆಗಳು ಮತ್ತು ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ. ಮಂಗಳೂರಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಕ್ರೂಸ್ ನೌಕೆಗಳನ್ನು ತರಲು ಮತ್ತು ಪ್ರವಾಸಿಗರು ಈ ಪ್ರದೇಶಗಳಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ಮಾಡಲು ಪ್ರಮುಖ ಕ್ರೂಸ್ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದೇವೆ ಎಂದರು.
ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಕುರಿತು ಪ್ರವಾಸೋದ್ಯಮ ಉದ್ಯಮವು ವ್ಯಕ್ತಪಡಿಸಿದ ಕಳವಳಗಳಿಗೂ ಸಚಿವರು ಸ್ಪಂದಿಸಿದರು.
ಸಿಆರ್ಝಡ್ ಕಾನೂನುಗಳು ಹೂಡಿಕೆಗೆ ಅಡ್ಡಿಯಾಗಿವೆ ಎಂಬುದು ನಮಗೆ ತಿಳಿದಿದೆ. ನೆರೆಯ ರಾಜ್ಯಗಳಾದ ಗೋವಾ ಮತ್ತು ಕೇರಳಕ್ಕೆ ಹೋಲಿಸಿದರೆ ನಮ್ಮಲ್ಲಿನ ಸ್ಥಳೀಯ ನಿಯಮಗಳು ಹೆಚ್ಚು ಕಠಿಣವಾಗಿವೆ ಎಂದು ಉದ್ಯಮದ ಪ್ರತಿನಿಧಿಗಳು ತಿಳಿಸಿದ್ದಾರೆ. ನಾವು ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಮತ್ತು ಕರ್ನಾಟಕದ ಕರಾವಳಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸರಳಗೊಳಿಸಲು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಅಗತ್ಯ ತಿದ್ದುಪಡಿಗಳನ್ನು ಕೋರಿ ಕೇಂದ್ರ ಸರ್ಕಾರಕ್ಕೆ ನಿಯೋಗವನ್ನು ಕರೆದೊಯ್ಯಲಿದ್ದೇವೆ ಎಂದರು.
ಪ್ರವಾಸೋದ್ಯಮ ವಲಯದಲ್ಲಿ ಹೆಚ್ಚಿನ ಖಾಸಗಿ ಭಾಗವಹಿಸುವಿಕೆಗೆ ಆಹ್ವಾನ ನೀಡಿದ ಸಚಿವರು, ಹೂಡಿಕೆದಾರರಿಗೆ ಸರ್ಕಾರದ ಬೆಂಬಲದ ಭರವಸೆ ನೀಡಿದರು.
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಹೂಡಿಕೆ ಬೇಕಾಗಿದೆ. ಸಬ್ಸಿಡಿಗಳು, ಏಕಗವಾಕ್ಷಿ ಮಂಜೂರಾತಿಗಳು ಮತ್ತು ಪ್ರೋತ್ಸಾಹಕಗಳನ್ನು ಒದಗಿಸುವ ಪ್ರವಾಸೋದ್ಯಮ ನೀತಿಗಳ ಮೂಲಕ ನಾವು ನಮ್ಮ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುತ್ತಿದ್ದೇವೆ. ನೀವು ರೆಸಾರ್ಟ್ ನಿರ್ಮಿಸಲು, ಸಾಹಸ ಕ್ರೀಡಾ ಸೌಲಭ್ಯ ಸ್ಥಾಪಿಸಲು ಅಥವಾ ಕ್ರೂಸ್ ಸೇವೆಯನ್ನು ಪ್ರಾರಂಭಿಸಲು ಬಯಸಿದರೆ, ನಾವು ನಿಮಗೆ ಬೆಂಬಲ ನೀಡುತ್ತೇವೆ. ಹೂಡಿಕೆದಾರರು ಅನಗತ್ಯ ಅಡೆತಡೆಗಳಿಲ್ಲದೆ ಕರ್ನಾಟಕದಲ್ಲಿ ಉದ್ಯಮ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದರು.
ಪ್ರವಾಸಿಗರ ಭದ್ರತೆಯು ಸರ್ಕಾರಕ್ಕೆ ಸದಾ ಪ್ರಮುಖ ಆದ್ಯತೆಯ ವಿಷಯ ಎಂದು ಸಚಿವರು ಒತ್ತಿ ಹೇಳಿದರು.
ಪ್ರವಾಸಿಗರು ನಮ್ಮ ರಾಜ್ಯದಲ್ಲಿ ಪ್ರಯಾಣಿಸುವಾಗ ಸುರಕ್ಷಿತ ಮತ್ತು ಆರಾಮದಾಯಕ ಭಾವನೆ ಹೊಂದಬೇಕು. ನಾವು ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಮೇಲೆ ಗಮನ ಹರಿಸುತ್ತಿದ್ದೇವೆ ಮತ್ತು ನೈರ್ಮಲ್ಯ, ಸುರಕ್ಷತೆ ಹಾಗೂ ಪರಿಸರ ನಿರ್ವಹಣೆಯ ಉನ್ನತ ಮಟ್ಟವನ್ನು ಖಚಿತಪಡಿಸಿಕೊಳ್ಳಲು ನಮ್ಮ ಕಡಲತೀರಗಳಿಗೆ ಹೆಚ್ಚಿನ ‘ಬ್ಲೂ ಫ್ಲಾಗ್’ ಪ್ರಮಾಣಪತ್ರಗಳನ್ನು ಪಡೆಯುವ ಗುರಿ ಹೊಂದಿದ್ದೇವೆ ಎಂದರು.
ಸರ್ಕಾರ ಮತ್ತು ಪ್ರವಾಸೋದ್ಯಮ ಉದ್ಯಮದ ನಡುವೆ ಹೆಚ್ಚಿನ ಸಹಯೋಗಕ್ಕೆ ಕರೆ ನೀಡಿದ ಜಾರ್ಜ್, ಪ್ರವಾಸೋದ್ಯಮದ ನಿರಂತರ ಪ್ರಗತಿಗೆ ಎಲ್ಲಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆ ಅಗತ್ಯ ಎಂದರು.
ಸರ್ಕಾರವೊಂದೇ ಎಲ್ಲವನ್ನೂ ನಿರ್ವಹಿಸಲು ಸಾಧ್ಯವಿಲ್ಲ. ಟೂರ್ ಆಪರೇಟರ್ಗಳು, ಟ್ರಾವೆಲ್ ಏಜೆಂಟ್ಗಳು, ಆತಿಥ್ಯ ಉದ್ಯಮದ ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರು ನಮ್ಮೊಂದಿಗೆ ಕೈಜೋಡಿಸುವ ಅಗತ್ಯವಿದೆ. ನಾವು ಮೂಲಸೌಕರ್ಯಗಳನ್ನು ನಿರ್ಮಿಸುತ್ತೇವೆ, ನೀತಿಗಳನ್ನು ಸರಳೀಕರಿಸುತ್ತೇವೆ ಮತ್ತು ಮಾರುಕಟ್ಟೆ ವೇದಿಕೆಯನ್ನು ಒದಗಿಸುತ್ತೇವೆ. ಉದ್ಯಮ ರಂಗವು ಪ್ರವಾಸಿಗರನ್ನು ಕರೆತಂದು ಗುಣಮಟ್ಟದ ಪ್ರಯಾಣದ ಅನುಭವಗಳನ್ನು ನೀಡಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದರು.
ಐಐಟಿಎಮ್ (IITM) ಅನ್ನು ಹೊಸ ಉದ್ಯಮ ಪಾಲುದಾರಿಕೆಗಳನ್ನು ರೂಪಿಸಲು ಸೂಕ್ತ ವೇದಿಕೆ ಎಂದು ಬಣ್ಣಿಸಿದ ಜಾರ್ಜ್, ಕರ್ನಾಟಕದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಪಾಲುದಾರರಾಗುವಂತೆ ಪ್ರತಿನಿಧಿಗಳಿಗೆ ಆಹ್ವಾನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ವ್ಯವಸ್ಥಾಪಕ ನಿರ್ದೇಶಕರಾದ ಶಿವಪ್ರಸಾದ್ ಪಿ.ಆರ್. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಶಿವರಾಂ ಬಾಬು ಹಾಗೂ ಸಿಹ್ರಾ (SIHRA) ಮತ್ತು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷರಾದ ಕೆ. ಶ್ಯಾಮರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

