ಚಿಕ್ಕಬಳ್ಳಾಪುರ: ರಾಜ್ಯವನ್ನು ಬೆಚ್ಚಿಬೀಳಿಸುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಈಗಾಗಲೇ ಒಂದು ಹೆಣ್ಣು ಮಗು ಇದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೆಣ್ಣು ಮಗು ಜನಿಸಿದ್ದಕ್ಕೆ ಆಕ್ರೋಶಗೊಂಡ ತಂದೆಯೊಬ್ಬ, ಕೇವಲ 13 ದಿನದ ಹಸುಗೂಸನ್ನು ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಆರೋಪಿ ಇಮ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಗುವಿನ ತಾಯಿ ಮುಸ್ಕಾನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇದ್ದು, ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ್ದರಿಂದ ಅಸಮಾಧಾನಗೊಂಡ ಇಮ್ರಾನ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೇವಲ 13 ದಿನದ ಹಸುಗೂಸನ್ನು ಮನೆಯ ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಘಟನೆಯ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಹೆಣ್ಣು ಮಕ್ಕಳ ವಿರುದ್ಧ ಸಮಾಜದ ಕೆಲವರಲ್ಲಿರುವ ತಾರತಮ್ಯ ಮನೋಭಾವ ಇನ್ನೂ ಜೀವಂತವಾಗಿರುವುದನ್ನು ಮತ್ತೊಮ್ಮೆ ಬಯಲಿಗೆಳೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

