ಜೈಪುರ: ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಿಎ ದ್ವಿತೀಯ ವರ್ಷದ ಪರೀಕ್ಷೆಯ ವೇಳೆ ಬೃಹತ್ ಮಾಸ್ ಕಾಪಿ ಪ್ರಕರಣ ಬೆಳಕಿಗೆ ಬಂದಿದೆ. ಪರೀಕ್ಷಾ ಮೇಲ್ವಿಚಾರಕರೇ (ಸೂಪರ್‌ವೈಸರ್) ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಹೇಳಿಕೊಡುತ್ತಿದ್ದ ದೃಶ್ಯವನ್ನು ವಿಶ್ವವಿದ್ಯಾಲಯದ ಫ್ಲೈಯಿಂಗ್ ಸ್ಕ್ವಾಡ್ ರೆಡ್‌ಹ್ಯಾಂಡ್ ಆಗಿ ಪತ್ತೆಹಚ್ಚಿದೆ.
ಜೈಸಲ್ಮೇರ್‌ನ ಕಜೋಯ್ ಗ್ರಾಮದ ಶ್ರೀ ಕರ್ಣಿ ಕಾಲೇಜಿನಲ್ಲಿ ಬೆಳಿಗ್ಗೆ ನಡೆದ ಬಿಎ ದ್ವಿತೀಯ ವರ್ಷದ ಹಿಂದಿ ಸಾಹಿತ್ಯ ಪರೀಕ್ಷೆ ವೇಳೆ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಫ್ಲೈಯಿಂಗ್ ಸ್ಕ್ವಾಡ್ ದಿಢೀರ್ ಪರಿಶೀಲನೆ ನಡೆಸಿತು. ಈ ವೇಳೆ ಇಬ್ಬರು ಸೂಪರ್‌ವೈಸರ್‌ಗಳು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಿರುವುದು ಪತ್ತೆಯಾಗಿದೆ. ಬಳಿಕ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಬಹುತೇಕ ವಿದ್ಯಾರ್ಥಿಗಳ ಉತ್ತರಗಳು ಒಂದೇ ರೀತಿಯಲ್ಲಿರುವುದನ್ನು ಗಮನಿಸಿ ಸಾಮೂಹಿಕ ನಕಲು ನಡೆದಿರುವುದನ್ನು ದೃಢಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿದ್ದ 93 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸೀಲ್ ಮಾಡಲಾಗಿದೆ. ನಂತರ ಅವರಿಗೆ ಹೊಸ ಉತ್ತರ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಮುಂದುವರಿಸಲು ಅವಕಾಶ ಕಲ್ಪಿಸಲಾಯಿತು. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳಲ್ಲಿಯೂ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಿರುವುದು ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ಈ ಪ್ರಕರಣವನ್ನು ‘ಮಾಸ್ ಕಾಪಿ’ ಎಂದು ದಾಖಲಿಸಿಕೊಂಡಿದ್ದು, ಸಂಬಂಧಿಸಿದ ವಿದ್ಯಾರ್ಥಿಗಳ ವಿರುದ್ಧ 1ರಿಂದ 3 ವರ್ಷಗಳವರೆಗೆ ಪರೀಕ್ಷೆಗೆ ನಿಷೇಧ ಹೇರಬಹುದಾಗಿದೆ. ಅಲ್ಲದೆ, ಅಕ್ರಮಕ್ಕೆ ಸಹಕರಿಸಿದ ಸೂಪರ್‌ವೈಸರ್‌ಗಳು ಹಾಗೂ ಕಾಲೇಜು ಆಡಳಿತದ ವಿರುದ್ಧವೂ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಪರೀಕ್ಷಾ ಅಕ್ರಮಗಳ ಸರಣಿ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಮೇಲ್ವಿಚಾರಣೆಯ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.

