ನವದೆಹಲಿ: ನೀಟ್-ಯುಜಿ (NEET-UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ನಡುವೆಯೇ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ರಾಜನಾಥ್ ಸಿಂಗ್, “ವಿದ್ಯಾರ್ಥಿಗಳೊಂದಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರ ಸಂಪೂರ್ಣ ಜವಾಬ್ದಾರಿಯಿಂದ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.
ಮೇ 3ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ, ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದೆ. ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತರಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಬೆಳವಣಿಗೆಯ ನಡುವೆ ಸರ್ಕಾರ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವುದಾಗಿ ಭರವಸೆ ನೀಡಿರುವ ರಾಜನಾಥ್ ಸಿಂಗ್, ಕೆಲ ರಾಜಕೀಯ ಪಕ್ಷಗಳು ಪ್ರತಿಭಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ ಎಂದು ಟೀಕಿಸಿದ್ದಾರೆ.
ರಾಜನಾಥ್ ಸಿಂಗ್ ಹೇಳಿದ್ದೇನು..?
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಅವರು ಹೀಗೆ ಬರೆದಿದ್ದಾರೆ: “ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಗಂಭೀರ ಕಳವಳದ ವಿಷಯವಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳು ಮತ್ತು ಯುವಕರನ್ನು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕೆಲವರು ರಾಜಕೀಯ ಸಾಧನವಾಗಿ ಬಳಸಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ.”ಎಂದಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಅತ್ಯಂತ ಗಂಭೀರ ಕಳವಳದ ವಿಷಯವಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳು ಮತ್ತು ಯುವಕರನ್ನು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕೆಲವರು ರಾಜಕೀಯ ಸಾಧನವಾಗಿ ಬಳಸಲು ಪ್ರಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ವಿದ್ಯಾರ್ಥಿಗಳು ಮತ್ತು ಯುವಕರ ಆಶಯಗಳನ್ನು ಈಡೇರಿಸಲು ಹಾಗೂ ಅವರ ಕಲ್ಯಾಣಕ್ಕಾಗಿ ಸಂಪೂರ್ಣ ಬದ್ಧವಾಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಯೊಂದು ಕಳವಳವನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಭಾರತದ ಜಾಗೃತ, ಪ್ರಬುದ್ಧ ಮತ್ತು ವಿವೇಚನಾಶೀಲ ಯುವಕರು ಇಂತಹ ದಾರಿ ತಪ್ಪಿಸುವ ಪ್ರಯತ್ನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅಭಿವೃದ್ಧಿ, ಪ್ರಗತಿ ಹಾಗೂ ರಾಷ್ಟ್ರ ನಿರ್ಮಾಣದ ಮಾರ್ಗವನ್ನೇ ಆಯ್ಕೆ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ಯಾವುದೇ ವ್ಯಕ್ತಿಗೆ, ವಿಶೇಷವಾಗಿ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಕೆಲ ಪ್ರತಿಪಕ್ಷ ನಾಯಕರು ಸೃಷ್ಟಿಸುತ್ತಿರುವ ಈ ಕೃತಕ ಆಕ್ರೋಶ (Manufactured Sense of Anger) ಜನರನ್ನು, ಅದರಲ್ಲೂ ಮಕ್ಕಳನ್ನು ಹಾಗೂ ಯುವಕರನ್ನು ಗೊಂದಲಕ್ಕೀಡು ಮಾಡಿ ದಾರಿ ತಪ್ಪಿಸುವ ವಿಫಲ ಪ್ರಯತ್ನವಾಗಿದೆ.
ಯುವಕರ ಭಾವನೆಗಳು ಮತ್ತು ಆತಂಕಗಳ ಬಗ್ಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸ್ಪಂದನಶೀಲವಾಗಿದೆ. ಸಂಸತ್ ಅಧಿವೇಶನ ನಡೆಯುತ್ತಿದ್ದು, ಪ್ರತಿಯೊಂದು ವಿಷಯದ ಮೇಲೂ ಅರ್ಥಪೂರ್ಣ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಈಗಾಗಲೇ ತಿಳಿಸಿದೆ. ಆದರೆ, ಸಂಸತ್ತಿನಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಬೀದಿಗಿಳಿದು ಪರಿಹರಿಸಲು ಪ್ರತಿಪಕ್ಷಗಳು ಅನುಚಿತ ಪ್ರಯತ್ನ ಮಾಡುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಾದ ಸೂಕ್ತ ವೇದಿಕೆ ಸಂಸತ್ತಾಗಿದೆ. ಅಲ್ಲಿ ಪ್ರತಿಪಕ್ಷಗಳಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಂಪೂರ್ಣ ಅವಕಾಶವಿದೆ. ಆದ್ದರಿಂದ ಪ್ರತಿಪಕ್ಷಗಳು ನಿಜವಾಗಿಯೂ ಗಂಭೀರವಾಗಿದ್ದರೆ, ನಡೆಯುತ್ತಿರುವ ಮುಂಗಾರು ಅಧಿವೇಶನದ ಸುಗಮ ಕಾರ್ಯಾಚರಣೆಗೆ ಅಡ್ಡಿಪಡಿಸದೆ, ದೇಶದ ಗಮನವನ್ನು ಎಲ್ಲಾ ವಿಷಯಗಳತ್ತ ಸಂಸತ್ತಿನಲ್ಲಿಯೇ ಸೆಳೆಯಬೇಕು ಎಂದಿದ್ದಾರೆ.

