ನವದೆಹಲಿ: ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ‘ಸಂಸದ್ ಚಲೋ’ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ.
‘ಸಂಸದ್ ಚಲೋ’ ಹಿಂಸಾಚಾರ ಪ್ರಕರಣದ ತನಿಖೆಯಲ್ಲಿ ಹೊಸ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರತಿಭಟನಾಕಾರರು ಪೊಲೀಸರು ನೆಟ್‌ವರ್ಕ್ ಜಾಮರ್‌ಗಳನ್ನು ಬಳಸಬಹುದು ಎಂಬ ಮುನ್ನೆಚ್ಚರಿಕೆಯಿಂದ, ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ವಿಶೇಷ ಆ್ಯಪ್‌ಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಡಿಜಿಟಲ್ ಚಾಟ್‌ಗಳ ಪರಿಶೀಲನೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿದ್ದು, ಹಿಂಸಾಚಾರದ ಹಿಂದಿನ ಸಂಚಿನ ಬಗ್ಗೆ ದೆಹಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ಹಿಂಸಾಚಾರದಲ್ಲಿ 118 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, 70ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಲವಾರು ಸರ್ಕಾರಿ ವಾಹನಗಳಿಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರತಿಭಟನಾಕಾರರು ಬಳಸಿದ ತಂತ್ರಜ್ಞಾನ ಮತ್ತು ಡಿಜಿಟಲ್ ಸಂವಹನದ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ಜಾಮರ್‌ಗಳಿಗೂ ಮಣಿಯದ ಸೀಕ್ರೆಟ್ ಆ್ಯಪ್‌ಗಳ ಬಳಕೆ
ಪಿಟಿಐಗೆ ಲಭ್ಯವಾದ ಗುಂಪು ಚಾಟ್‌ಗಳ ಪ್ರಕಾರ, ಪ್ರತಿಭಟನಾಕಾರರು ಮುಂಚಿತವಾಗಿಯೇ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಬಹುದು, ನೆಟ್‌ವರ್ಕ್ ಜಾಮರ್‌ಗಳನ್ನು ಬಳಸಬಹುದು ಎಂದು ಊಹಿಸಿ, ಇಂಟರ್ನೆಟ್ ಇಲ್ಲದಿದ್ದರೂ ಬ್ಲೂಟೂತ್ ಸಿಗ್ನಲ್‌ಗಳ ಮೂಲಕ ಕಾರ್ಯನಿರ್ವಹಿಸುವ ವಿಶೇಷ ಆ್ಯಪ್‌ಗಳನ್ನು ಬಳಸುವಂತೆ ಪರಸ್ಪರ ಸೂಚನೆ ನೀಡಿದ್ದರು.ಪ್ರತಿಭಟನೆಗೆ ತೆರಳುವ ಮುನ್ನವೇ ಎಲ್ಲರೂ ಒಂದೇ ರೀತಿಯ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಪರಸ್ಪರ ಸಂಪರ್ಕದಲ್ಲಿರಲು ಸೂಚಿಸಿದ್ದರೆಂದು ಚಾಟ್‌ಗಳಿಂದ ತಿಳಿದುಬಂದಿದೆ.
‘ಪ್ರಾಣತ್ಯಾಗಕ್ಕೂ ಸಿದ್ಧರಾಗಿ’ ಎಂಬ ಪ್ರಚೋದನಕಾರಿ ಸಂದೇಶಗಳು
ಚಾಟ್‌ಗಳಲ್ಲಿ ಕೇವಲ ಸಂವಹನದ ಯೋಜನೆ ಮಾತ್ರವಲ್ಲದೆ, ತೀವ್ರ ರಾಜಕೀಯ ಹೇಳಿಕೆಗಳು ಹಾಗೂ ಉದ್ರೇಕಕಾರಿ ಸಂದೇಶಗಳೂ ಇದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಒಂದು ಸಂದೇಶದಲ್ಲಿ, “ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವವರು ಗಮನಿಸಿ. ನಿಮ್ಮ ತ್ಯಾಗವನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುತ್ತದೆ” ಎಂದು ಬರೆಯಲಾಗಿತ್ತು. ಮತ್ತೊಂದು ಸಂದೇಶದಲ್ಲಿ, “ಯಾರಾದರೂ ಮೃತಪಟ್ಟರೆ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೆಚ್ಚಾಗುತ್ತದೆ” ಎಂಬ ಮಾತುಗಳೂ ಕಂಡುಬಂದಿವೆ.
ಫೊರೆನ್ಸಿಕ್ ಪರಿಶೀಲನೆ ಆರಂಭ
ಈ ಸಂದೇಶಗಳು ಪ್ರತಿಭಟನಾಕಾರರ ವೈಯಕ್ತಿಕ ಅಭಿಪ್ರಾಯಗಳೇ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಂಚಿನ ಭಾಗವೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಸಿಸಿಟಿವಿ ದೃಶ್ಯಗಳು, ಡ್ರೋನ್ ವಿಡಿಯೊಗಳು, ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಹಾಗೂ ಲಭ್ಯವಿರುವ ಡಿಜಿಟಲ್ ಸಾಕ್ಷ್ಯಗಳನ್ನು ಫೊರೆನ್ಸಿಕ್ ತಜ್ಞರು ಪರಿಶೀಲಿಸುತ್ತಿದ್ದಾರೆ. ಸಂದೇಶಗಳ ಮೂಲ ಮತ್ತು ಅವುಗಳ ಪ್ರಾಮಾಣಿಕತೆಯನ್ನು ಸೈಬರ್ ತಜ್ಞರು ದೃಢೀಕರಿಸುತ್ತಿದ್ದು, ಎಲ್ಲಾ ತಾಂತ್ರಿಕ ಸಾಕ್ಷ್ಯಗಳು ಖಚಿತವಾದ ಬಳಿಕವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

