HomeLatest NewsBIG NEWS: ಜು. 25, 26ರಂದು ರಾಜ್ಯಾದ್ಯಂತ ಬಿಜೆಪಿಯಿಂದ ಎಸ್ಐಆರ್ ಜಾಗೃತಿ ಅಭಿಯಾನ

BIG NEWS: ಜು. 25, 26ರಂದು ರಾಜ್ಯಾದ್ಯಂತ ಬಿಜೆಪಿಯಿಂದ ಎಸ್ಐಆರ್ ಜಾಗೃತಿ ಅಭಿಯಾನ

ಶಿವಮೊಗ್ಗ: ಜುಲೈ 25-26ರಂದು ರಾಜ್ಯ ಬಿಜೆಪಿ ವತಿಯಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳ, ಕಾರ್ಯಕರ್ತರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಎಸ್‌ಐಆರ್ ಕುರಿತು ಮನೆ ಮನೆಗೆ ತೆರಳಿ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸುಮಾರು 1 ಕೋಟಿ ಮನೆಗಳಿಗೆ ಎಸ್‌ಐಆರ್ ಎನ್ಯೂಮರೇಷನ್ ಫಾರಂನ್ನು ವಿತರಿಸಲಾಗುವುದು. ಪ್ರತಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆ ತಲುಪಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿಯೇ ಮುಳುಗಿದ್ದು, ಅನಾವೃಷ್ಟಿಯಿಂದ ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರು ಕೇವಲ ಕನಕಪುರಕ್ಕೆ ಮಾತ್ರ ಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಸಿಎಂ ಆಗಿದ್ದೀರಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಮುಗಿಲತ್ತ ಮುಖಮಾಡಿ ನಿಂತಿದ್ದಾರೆ. ಮುಖ್ಯಮಂತ್ರಿಗಳು ರೈತರ ಪರಿಸ್ಥಿತಿಯ ಬಗ್ಗೆ ಅಧ್ಯಯನವನ್ನೇ ಮಾಡಿಲ್ಲ. ಕೇವಲ ತಂಡ ಕಟ್ಟಿಕೊಂಡು ದೆಹಲಿ ಪ್ರವಾಸದಲ್ಲಿ ನಿರತರಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಬರದ ಕುರಿತು ಕೇವಲ ಪತ್ರಬರೆದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಬಿಡದಿ ರಿಯಲ್ ಎಸ್ಟೇಟ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದಾರೋ ಅಷ್ಟೇ ರೈತರ ಬಗ್ಗೆ ಕಾಳಜಿವಹಿಸಿದ್ದರೆ ಬರದ ಸಮಸ್ಯೆ ಎಷ್ಟೋ ನೀಗುತ್ತಿತ್ತು ಎಂದು ವ್ಯಂಗ್ಯವಾಡಿದರು.

ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ನೆರೆ ಸಂದರ್ಭದಲ್ಲಿ ತಕ್ಷಣ ತಾವೇ ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಂಡಿದ್ದರು ಎಂಬುದನ್ನು ಸ್ಮರಿಸಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಚಿವರು ತಕ್ಷಣ ಬರಪೀಡಿತ ಪ್ರದೇಶಗಳಿಗೆ ತೆರಳಿ, ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೆಹಲಿಯ ಜಂತರ್-ಮಂತರ್‌ನಲ್ಲಿ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೇವಲ ರಾಜಕಾರಣಕ್ಕಾಗಿದೆ. ಪ್ರತಿಭಟನೆಗೆ ನನ್ನ ವಿರೋಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಈ ಪ್ರತಿಭಟನೆ ಅರಾಜಕತೆ ಸೃಷ್ಟಿಸುವ ಪ್ರಯತ್ನವಾಗಿದೆ. ಇದರ ಹಿಂದೆ ಕೆಲ ರಾಜಕಾರಣಿಗಳ ಷಡ್ಯಂತ್ರವಿದ್ದು, ಕೇಂದ್ರ ಸರ್ಕಾರವನ್ನು ದುರ್ಬಲಗೊಳಿಸುವ ಹುನ್ನಾರ ಈ ಪ್ರತಿಭಟನೆಯ ಹಿಂದಿದೆ ಎಂದ ಅವರು, ನೀಟ್ ಪರೀಕ್ಷೆಯಿಂದಾದ ಲೋಪದ ಬಗ್ಗೆ ಈಗಾಗಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟನಾಕಾರರ ಪ್ರಮುಖರನ್ನು ಕರೆದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಕೂಡ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಮರು ಪರೀಕ್ಷೆಯನ್ನು ನಡೆಸಿಕೊಡಲಾಗಿದೆ. ಪ್ರತಿಭಟನೆ ಶಾಂತ ರೀತಿಯಲ್ಲಿ ಸಂಪನ್ನಗೊಳ್ಳುವ ನಂಬಿಕೆ ನಮ್ಮದಾಗಿದೆ ಎಂದರು.

ಪ್ರಧಾನಿ ಮೋದಿಯವರು ದುರ್ಬಲ ಹಾಗೂ ದುಷ್ಟರಕ್ಷಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಬಿ.ವೈ.ವಿಜಯೇಂದ್ರ ಬಲವಾಗಿ ಖಂಡಿಸಿ ತಾವು ಸಿಎಂ ಇದ್ದಾಗ ಧಾರಾವಾಡದಲ್ಲಿ ಎರಡೂವರೆ ಲಕ್ಷ ಪದವೀಧರರು ಬೀದಿಗಿಳಿದು ಹೋರಾಟ ಮಾಡಿದ ಸಂದರ್ಭದಲ್ಲಿ ಹುದ್ದೆ ಭರ್ತಿಮಾಡುವ ಆಶ್ವಾಸನೆ ಈಡೇರಿಸಿದ್ದೀರಾ ಎಂದು ಕಟುವಾಗಿ ಪ್ರಶ್ನಿಸಿದರು.

ಕನಕಪುರದಲ್ಲಿ ನೂತನ ವಿಮಾನ ನಿಲ್ದಾಣ ಮಾಡುವ ಮಹಾದಾಸೆಯನ್ನು ಹೊಂದಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಾನು ಈ ವಿಮಾನ ನಿಲ್ದಾಣವನ್ನು ಕನಕಪುರದಲ್ಲಿ ಬೇಡ ತುಮಕೂರಿನಲ್ಲೇ ವಿಮಾನ ನಿಲ್ದಾಣ ನಿರ್ಮಿಸಿ ಎಂದು ಪತ್ರ ಬರೆದಿದ್ದೇನೆ. ಬೆಂಗಳೂರಿನಲ್ಲಿ ಹಾಲಿ ಇರುವ ಸಂಚಾರ ದಟ್ಟಣೆ ತಪ್ಪಿಸಲು ತುಮಕೂರಿನಲ್ಲೇ ವಿಮಾನ ನಿಲ್ದಾಣ ನಿರ್ಮಿಸುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular