ಬೆಂಗಳೂರು: ರಾಜ್ಯ ಪೊಲೀಸರು ಗಂಭೀರ ಪ್ರಕರಣಗಳಿಗೆ ಆದ್ಯತೆ ನೀಡುವುದನ್ನು ಬಿಟ್ಟು ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೇಲಿನ ಕ್ರಮಕ್ಕೆ ಹೆಚ್ಚು ಗಮನಹರಿಸುತ್ತಿರುವ ವಿಚಾರವಾಗಿ ಹೈಕೋರ್ಟ್ ಗರಂ ಆಗಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿಚಾರದಲ್ಲಿ ಪೊಲೀಸರು ತ್ವರಿತವಾಗಿ ಎಫ್‌ಐಆರ್ ದಾಖಲಿಸುತ್ತಿರುವುದನ್ನು ಪ್ರಶ್ನಿಸಿದ ಹೈಕೋರ್ಟ್, ಗಂಭೀರ ಅಪರಾಧಗಳ ವಿರುದ್ಧ ಅದೇ ಮಟ್ಟದ ಕಠಿಣ ಕ್ರಮ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ನಡೆ ಕಾನೂನು ಜಾರಿ ವ್ಯವಸ್ಥೆಯಲ್ಲಿ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿ ಕಿರಣ್ ಆರಾಧ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಗುಂಪಿನ ಉಲ್ಲೇಖವಿಲ್ಲ ಎಂದು ನ್ಯಾಯಾಲಯದ ಗಮನಲಕ್ಕೆ ತಂದರು. ಎಫ್‌ಐಆರ್ ಕೇವಲ ಊಹೆ ಮತ್ತು ವೈಯಕ್ತಿಕ ವ್ಯಾಖ್ಯಾನಗಳ ಆಧಾರದ ಮೇಲೆ ದಾಖಲಾಗಿದ್ದು, ಕಾನೂನು ಆಧಾರವಿಲ್ಲದೆ ಪೋಸ್ಟ್‌ಗೆ ಸಾಮುದಾಯಿಕ ಬಣ್ಣ ನೀಡುವ ಪ್ರಯತ್ನ ನಡೆದಿದೆ ಎಂದು ವಾದಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ವಕೀಲ ಬಿ.ಎನ್. ಜಗದೀಶ್, ಎಫ್‌ಐಆರ್ ದಾಖಲಾಗಿ ಕೇವಲ ಎರಡು ದಿನಗಳಷ್ಟೇ ಆಗಿದ್ದು, ಅರ್ಜಿದಾರರಿಗೆ ಪೊಲೀಸರು ಯಾವುದೇ ನೋಟಿಸ್ ಸಹ ನೀಡಿಲ್ಲ. ಅರ್ಜಿದಾರರು ತನಿಖೆ ಆರಂಭವಾಗುವ ಮುನ್ನವೇ ಹೈಕೋರ್ಟ್‌ಗೆ ಬಂದಿದ್ದಾರೆ. ಈ ಹಂತದಲ್ಲಿ ತನಿಖೆಗೆ ಅಡ್ಡಿಯಾಗುವಂತಹ ಯಾವುದೇ ರಕ್ಷಣೆ ನೀಡಬಾರದು ಎಂದು ಮವಿ ಮಾಡಿದ್ದರು.
ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಗಂಭೀರ ಅಪರಾಧಗಳ ತನಿಖೆಗಿಂತ ಸೋಷಿಯಲ್ ಮೀಡಿಯಾಗಳಲ್ಲಿನ ಪೋಸ್ಟ್‌ಗಳ ಮೇಲಿನ ಕ್ರಮಕ್ಕೆ ಏಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದೆ. ಇದೇ ವೇಳೆ ಪ್ರಕರಣದ ಸವಿಸ್ತಾರ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅರ್ಜಿದಾರರ ವಿರುದ್ಧದ ಮುಂದಿನ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ.

