ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ಜಾಲಿ ಸಿನಿಮಾದ ಅಧಿಕೃತ ಟ್ರೈಲರ್ ಇದೀಗ ಪ್ರಸಿದ್ಧ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆಯನ್ನು ಸೆಳೆಯುವ ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಟ್ರೈಲರ್ ಬಿಡುಗಡೆಯಾದ ಕೆಲವೇ ಸಮಯದಲ್ಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಈ ಚಿತ್ರದಲ್ಲಿ ಯುವ ನಟ ತಾರುಷ್ ನಾಯಕನಾಗಿ ಮಿಂಚಿದ್ದು, ಅವರಿಗೆ ಜೋಡಿಯಾಗಿ ನಟಿ ಪದ್ಮಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ರುಶಾಂಕ್ ಜೊತೆಗೆ ಹಿರಿಯ ಕಲಾವಿದರಾದ ಶೋಭರಾಜ್ ಹಾಗೂ ರೇಖಾ ದಾಸ್ ಅವರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ನಟ ತಾರುಷ್ ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಟಿಬಿವೈ ಕ್ರಿಯೇಷನ್ಸ್ ಮತ್ತು ಶ್ರೀ ಅಧೀಶಿವ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಬ್ರಿಜ್ ಯಾದವ್ ಹಾಗೂ ನಾಗವೇಣಿ ಎನ್ ಅವರು ಅತ್ಯಂತ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ತಾಂತ್ರಿಕ ಬಳಗವೂ ಸಖತ್ ಮಜಬೂತಾಗಿದೆ. ನಿಥಿನ್ ರಾಜ್ ಅವರ ಸಂಗೀತ ಸಂಯೋಜನೆ ಟ್ರೈಲರ್‌ಗೆ ಮೆರುಗು ನೀಡಿದ್ದರೆ, ಯೋಗೇಶ್ವರನ್ ಆರ್ ಅವರ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಡ್ಯಾನ್ಸ್ ಮಾಸ್ಟರ್ ರಾಮ್ ಅವರ ನೃತ್ಯ ನಿರ್ದೇಶನ ಹಾಗೂ ಎ ಸತೀಶ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಇನ್ನು ಸತ್ಯಜಿತ್ ಸಿದ್ದಕಟ್ಟೆ ಅವರ ಬಣ್ಣದ ಸಂಯೋಜನೆ, ವೀರೇಶ್ ಎಸ್ ಬಾಗೇವಾಡಿ ಅವರ ಮೇಕಪ್ ಹಾಗೂ ಜಯಲಕ್ಷ್ಮಿ, ಕಲ್ಪಿತಾ ಮತ್ತು ರಮ್ಯಾ ಭೂಷಣ್ ಅವರ ಕಾಸ್ಟ್ಯೂಮ್ ಡಿಸೈನಿಂಗ್ ಸಿನಿಮಾದ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಟ್ರೈಲರ್ ಮೂಲಕವೇ ಕುತೂಹಲ ಮೂಡಿಸಿರುವ ಜಾಲಿ ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ.

