ಮನೆ ಖರೀದಿ ಎನ್ನುವುದು ಕೇವಲ ವಾಸಕ್ಕೊಂದು ಜಾಗ ಕಂಡುಕೊಳ್ಳುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಉತ್ತಮ ಲಾಭಾಂಶ ತರಬಲ್ಲ ಸೂಕ್ತ ಹೂಡಿಕೆಯಾಗಿದೆ ಆದರೆ, ಹಳೆಯ ಮನೆಯನ್ನು ಮಾರಾಟಕ್ಕಿಡುವುದು ಅಂದುಕೊಂಡಷ್ಟು ಸುಲಭವಲ್ಲ. ಮನೆ ನೋಡಲು ಬರುವ ಖರೀದಿದಾರರ ಕಣ್ಣಿಗೆ ನಿಮ್ಮ ಆಸ್ತಿ ಆಕರ್ಷಕವಾಗಿ ಹಾಗೂ ಮೌಲ್ಯಯುತವಾಗಿ ಕಾಣುವುದು ಅತ್ಯಗತ್ಯ.
ಹಳೆಯ ಗೋಡೆಗಳು, ಸಣ್ಣಪುಟ್ಟ ಹಾನಿ ಅಥವಾ ಕಾನೂನು ದಾಖಲೆಗಳ ಗೊಂದಲಗಳಿದ್ದರೆ ಖರೀದಿದಾರರು ನೀವು ಕೇಳಿದ ಬೆಲೆ ನೀಡಲು ಹಿಂಜರಿಯಬಹುದು. ಆದ್ದರಿಂದ, ಮನೆಯನ್ನು ರಿಸೇಲ್ಗೆ ಇಡುವ ಮುನ್ನ ಸರಿಯಾದ ಯೋಜನೆ ರೂಪಿಸಿ, ಕೆಲವು ನಿರ್ಣಾಯಕ ಬದಲಾವಣೆಗಳನ್ನು ಮಾಡುವುದರಿಂದ ಕೈತುಂಬ ಲಾಭ ಪಡೆಯಲು ಸಾಧ್ಯವಿದೆ.
ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಮನೆಯ ಮರುಮಾರಾಟ ಮೌಲ್ಯವನ್ನು ಹೆಚ್ಚಿಸಲು ಗಮನಿಸಬೇಕಾದ ಪ್ರಮುಖ 5 ಅಂಶಗಳು ಇಲ್ಲಿವೆ:
ಲೊಕೇಷನ್ ಮತ್ತು ಕನೆಕ್ಟಿವಿಟಿ (ಸ್ಥಳ ಮತ್ತು ಸಂಪರ್ಕ)
ಮನೆಯ ಮರುಮಾರಾಟ ಮೌಲ್ಯವನ್ನು ನಿರ್ಧರಿಸುವ ಮೂಲಮಂತ್ರವೇ ಲೊಕೇಷನ್. ಪ್ರಮುಖ ರಸ್ತೆಗಳು, ಮೆಟ್ರೋ ಸ್ಟೇಷನ್, ಬಸ್ ಹಾಗೂ ರೈಲು ನಿಲ್ದಾಣಗಳಿಗೆ ಸುಲಭ ಸಂಪರ್ಕವಿದೆಯೇ ಎನ್ನುವುದು ಮನೆಗೆ ಪ್ರೀಮಿಯಂ ಬೆಲೆ ತಂದುಕೊಡುತ್ತದೆ. ಇದರೊಂದಿಗೆ ಶಾಲೆಗಳು, ಆಸ್ಪತ್ರೆಗಳು, ಶಾಪಿಂಗ್ ಮಾಲ್ಗಳು ಹಾಗೂ ಐಟಿ ಪಾರ್ಕ್ಗಳು ಹತ್ತಿರದಲ್ಲಿದ್ದರೆ ಆಸ್ತಿಯ ಮೌಲ್ಯ ಇಮ್ಮಡಿಯಾಗುತ್ತದೆ.
ಗುಣಮಟ್ಟದ ಪೇಂಟಿಂಗ್ (ಮನೆಗೆ ಹೊಸ ಮೆರುಗು)
ಹಳೆಯ ಮನೆಗೆ ಬಣ್ಣ ಬಳಿಯುವುದು ಕೇವಲ ಸೌಂದರ್ಯವರ್ಧಕವಲ್ಲ, ಬದಲಿಗೆ ಮೌಲ್ಯ ಹೆಚ್ಚಿಸುವ ಶಕ್ತಿಶಾಲಿ ಅಸ್ತ್ರ. ಉತ್ತಮ ಗುಣಮಟ್ಟದ ಪೇಂಟಿಂಗ್ ಮಾಡಿಸುವುದರಿಂದ ಗೋಡೆಗಳ ಹಳೆಯ ಕಲೆ ಮತ್ತು ಸವೆತಗಳು ಮರೆಯಾಗಿ ಮನೆಗೆ ತಾಜಾತನ ಸಿಗುತ್ತದೆ. ಕೋಣೆಗಳಿಗೆ ತಿಳಿ ಅಥವಾ ತಟಸ್ಥ ಬಣ್ಣಗಳನ್ನು (Neutral Colors) ಬಳಕೆಯಾಗಿದ್ದರೆ, ಸಣ್ಣ ಕೊಠಡಿಗಳೂ ಪ್ರಕಾಶಮಾನವಾಗಿ ಹಾಗೂ ವಿಸ್ತಾರವಾಗಿ ಕಾಣಿಸುತ್ತವೆ.
ಅಗತ್ಯ ರಿಪೇರಿ ಮತ್ತು ವಿನ್ಯಾಸದ ಸರಿಪಡಿಸುವಿಕೆ
ಹಲವು ವರ್ಷಗಳ ವಾಸದಿಂದ ಗೋಡೆಗಳಲ್ಲಿ ಬಿರುಕು, ಸೋರಿಕೆ ಅಥವಾ ನೆಲದ ಹಾನಿ ಸಹಜ. ಆದರೆ, ಮನೆ ನೋಡಲು ಬರುವವರ ಕಣ್ಣಿಗೆ ಮುರಿದ ಬಾಗಿಲು, ಕಿಟಕಿ, ಅಥವಾ ಶೌಚಾಲಯದ ಹಾನಿಗೊಳಗಾದ ಫಿಟ್ಟಿಂಗ್ಸ್ಗಳು ಬಿದ್ದರೆ ಅದು ನಕಾರಾತ್ಮಕ ಇಂಪ್ರೆಷನ್ ಮೂಡಿಸುತ್ತದೆ. ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಹಾಗೂ ಸುಸಜ್ಜಿತ ರಿಪೇರಿ ಕಾರ್ಯಗಳು ಖರೀದಿದಾರರಲ್ಲಿ ತಕ್ಷಣದ ಆಸಕ್ತಿ ಮೂಡಿಸುತ್ತವೆ.
ಸ್ಪಷ್ಟ ಮತ್ತು ಶುದ್ಧ ಕಾನೂನು ದಾಖಲೆಗಳು
ಮನೆ ಹೊರಗಿನಿಂದ ಎಷ್ಟೇ ಸುಂದರವಾಗಿದ್ದರೂ, ಕಾನೂನುಬದ್ಧ ದಾಖಲೆಗಳು ಸರಿಯಿಲ್ಲದಿದ್ದರೆ ಮರುಮಾರಾಟ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ. ಸ್ಪಷ್ಟವಾದ ಹಕ್ಕು ಪತ್ರ (Clear Title Deed), ಎನ್ಒಸಿ (NOC), ಮತ್ತು ಋಣಭಾರ ರಾಹಿತ್ಯ ಪ್ರಮಾಣಪತ್ರಗಳು (Encumbrance Certificate – EC) ಸರಿಯಾಗಿದ್ದಲ್ಲಿ, ಖರೀದಿದಾರರಿಗೆ ವಿಶ್ವಾಸ ಮೂಡುತ್ತದೆ. ಕಾನೂನು ಗೊಂದಲವಿಲ್ಲದ ಸ್ವತ್ತುಗಳು ಶೀಘ್ರವಾಗಿ ಮತ್ತು ಉತ್ತಮ ಬೆಲೆಗೆ ಮಾರಾಟವಾಗುತ್ತವೆ.

