ಕಾನ್ಪುರ : ಸರ್ಕಾರಿ ಉದ್ಯೋಗ ಪಡೆಯುವ ಕನಸಿನೊಂದಿಗೆ ಸುಮಾರು 50 ಬಾರಿ ವಿವಿಧ ನೇಮಕಾತಿ ಪರೀಕ್ಷೆಗಳನ್ನು ಬರೆದರೂ ಯಶಸ್ಸು ಸಿಗದ ಹಿನ್ನೆಲೆಯಲ್ಲಿ, ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತ ಯುವಕನನ್ನು ಆನಂದ್ (23) ಎಂದು ಗುರುತಿಸಲಾಗಿದೆ. ಕಾನ್ಪುರದ ಗೋವಿಂದ್ ನಗರದಲ್ಲಿನ ಗುಜೈನಿ ಪ್ರದೇಶದ ನಿವಾಸಿಯಾಗಿದ್ದ ಆನಂದ್, 2024ರಲ್ಲಿ PSIT ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದನು. ಉತ್ತರ ಪ್ರದೇಶ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಕ್ಕಾಗಿ 2024ರ ಆಗಸ್ಟ್ 13ರಂದು ನಡೆದ ಕಾಲೇಜಿನ ಸಮಾರಂಭದಲ್ಲಿ ಅವನಿಗೆ ಗೋಲ್ಡ್ ಮೆಡಲ್ ನೀಡಿ ಸನ್ಮಾನಿಸಲಾಗಿತ್ತು.
ಇತ್ತೀಚೆಗೆ ಆನಂದ್ನ ಅಣ್ಣನ ಮದುವೆ ಸಿದ್ಧತೆಗಾಗಿ ಕುಟುಂಬದವರು ಬಿಹಾರಕ್ಕೆ ತೆರಳಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ಆನಂದ್ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆ ಕೆಲಸದಾಕೆ ಹಲವು ಬಾರಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ನೆರೆಹೊರೆಯವರೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಆನಂದ್ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಐದು ಸಾಲುಗಳ ಕೈಬರಹದ ಆತ್ಮಹತ್ಯೆ ಪತ್ರವೂ ದೊರೆತಿದೆ. ಅದರಲ್ಲಿ,”ಕ್ಷಮಿಸಿ ಅಪ್ಪಾ… ಸರ್ಕಾರಿ ಉದ್ಯೋಗಕ್ಕಾಗಿ ಸುಮಾರು 50 ಬಾರಿ ಪ್ರಯತ್ನಿಸಿದೆ. ಆದರೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾನೆ.ಪೋಸ್ಟ್ಮಾರ್ಟಂ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಜುಲೈ 18ರಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನಂದ್ನ ತಂದೆ ರಾಜ್ಕುಮಾರ್ ಅವರ ಪ್ರಕಾರ, ಬಿ.ಟೆಕ್ ಪದವಿ ಪಡೆದ ಬಳಿಕ ಆನಂದ್ ಪವರ್ ಗ್ರಿಡ್ನಲ್ಲಿ ಒಂದು ವರ್ಷದ ಅಪ್ರೆಂಟಿಸ್ಶಿಪ್ ಪೂರ್ಣಗೊಳಿಸಿದ್ದನು. ನಂತರ ರೈಲ್ವೆ, ಎಸ್ಎಸ್ಸಿ, ಬ್ಯಾಂಕ್ ಹಾಗೂ ಶಿಕ್ಷಣ ಇಲಾಖೆಯ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗಿದ್ದರೂ ಯಶಸ್ಸು ಸಿಗಲಿಲ್ಲ. ಇದರಿಂದ ಕಳೆದ ಕೆಲವು ತಿಂಗಳುಗಳಿಂದ ಆತ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು ಎಂದು ಅವರು ತಿಳಿಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಸರ್ಕಾರಿ ಉದ್ಯೋಗ ಸಿಗದ ನಿರಾಶೆಯೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಗೋವಿಂದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಕರಣದ ಎಲ್ಲಾ ಸಾಧ್ಯತೆಗಳ ಬಗ್ಗೆ ತನಿಖೆ ಮುಂದುವರಿದಿದೆ.ಓದುದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ಎಂಜಿನಿಯರಿಂಗ್ ಪದವೀಧರನ ಈ ದುರ್ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಸೂಚನೆ: ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಕುಟುಂಬದವರು, ಸ್ನೇಹಿತರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡಿ. ಅಗತ್ಯವಿದ್ದರೆ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಿರಿ. ಸಮಯಕ್ಕೆ ಸಹಾಯ ಕೇಳುವುದು ಧೈರ್ಯದ ಹೆಜ್ಜೆಯಾಗಿದೆ.

