ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ನಾಳೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ತಾಯಿ ಚೆನ್ನಮ್ಮ ಅವರ ಅಗಲಿಕೆಯಿಂದ ತೀವ್ರ ದುಃಖದಲ್ಲಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಾಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಾಯಿ ಚೆನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದಾರೆಯಾದರೂ ನಾನೆಂದರೆ ಅವರಿಗೆ ತುಸು ಜಾಸ್ತಿ ಪ್ರೀತಿ ಇತ್ತು. ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ಅವರು ನನಗೆ ಹಿತವಚನ ನೀಡಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಹಲವು ಪಕ್ಷಗಳಲ್ಲಿ ಇರುವ ನಾಯಕರೆಲ್ಲ ನಮ್ಮ ಅಮ್ಮನ ಹಾರೈಕೆಯಲ್ಲಿ ಬೆಳೆದವರೆ. ಹೀಗಾಗಿ ಅವರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲರೂ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇವತ್ತಿನ ಸಮಾಜಕ್ಕೆ ನಮ್ಮ ತಂದೆ ತಾಯಿಯ ದಾಂಪತ್ಯ ಮಾದರಿಯಾಗಿದೆ ಎಂದರು.
ಗಂಡ ಮುಖ್ಯಮಂತ್ರಿಯಾದಗಲೂ, ಪ್ರಧಾನಿಯಾಅದಾಗಲೂ ನಮ್ಮ ಅಮ್ಮ ಮನೆಯಿಂದ ಹೊರ ಬಂದವರಲ್ಲ. ಅವರಾಯಿತು ಅವರ ದೇವರ ಮನೆಯಾಯಿತು ಎಂದು ಇದ್ದಂತವರು. ಸಮಯವಾದಾಗಲೆಲ್ಲ ನಾನು ಅಮ್ಮನ ಬಳಿಯೇ ಇರುತ್ತಿದ್ದೆ ಎಂದು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.

