ಬೆಂಗಳೂರು: ತನ್ನ ಅಣ್ಣನನ್ನು ಮದುವೆಯಾಗಲು ಯುವತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಣ್ಣ ಧನುಷ್ ಜೊತೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಮ್ಮ ಸೂರ್ಯ ಎಂಬಾತ ಚಾಕು ಇರಿದು ಯುವತಿ ಅಮ್ರಿತಾಳನ್ನು ಕೊಲೆಗೈದ ಘಟನೆ ಬೆಂಗಳುರಿನಲ್ಲಿ ನಡೆದಿತ್ತು. ಇದೀಗ ಅಮೃತಾ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮದುವೆ ಮಾತ್ರವಲ್ಲದೆ ಹಣಕಾಸಿನ ವಿಚಾರ ಕೂಡ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೃತ ಯುವತಿಯ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಅಮೃತಾ ಹೇಳಿದ್ದಕ್ಕೆ ಧನುಷ್ ಸಹೋದರರು ಅವರ ತಾಯಿಯ ಬಳಿ ಚೀಟಿ ಹಾಕಿದ್ದರು. ಅದರಲ್ಲಿ ಧನುಷ್ ಸಹೋದರ ಸೂರ್ಯನೇ ಹೆಚ್ಚಿನ ಕಂತು ಕಟ್ಟಿದ್ದ. ಚೀಟಿ ಮುಗಿದಿದ್ದರೂ ಹಣವನ್ನು ಅಮೃತಾ ತಾಯಿ ಹಿಂದಿರುಗಿಸಿರಲಿಲ್ಲ ಎಂಬ ವಿಚಾರವೀಗ ಬಹಿರಂಗಗೊಂಡಿದೆ.
ಚೀಟಿ ಅವಧಿ ಮುಗಿದಿದ್ದರೂ ತಮ್ಮ 5 ಲಕ್ಷ ರೂಪಾಯಿ ಹಣವನ್ನು ಅಮೃತಾ ಮತ್ತು ಆಕೆಯ ತಾಯಿ ನೀಡದಿರುವ ಬಗ್ಗೆ ಆರೋಪಿ ಸೂರ್ಯನಿಗೆ ಸಿಟ್ಟಿತ್ತು. ಹಣ ಕೊಡುವಂತೆ ಪದೇ ಪದೆ ಕೇಳಿದರೂ ನೀಡದಿರುವ ನಡುವೆ ಅಣ್ಣನ ಮದುವೆಯಾಗಲೂ ಆಕೆ ನಿರಾಕರಿಸಿದ್ದರಿಂದ ಮತ್ತಷ್ಟು ಕೋಪಗೊಂಡಿದ್ದ. ಹೀಗಾಗಿ ಅಮೃತಾ ಕೊಲೆಗೆ ಸೂರ್ಯ ನಿರ್ಧರಿಸಿದ್ದ. ಆಕೆಯ ಮೇಲೆ ದಾಳಿ ನಡೆಸಿರುವ ದಿನ ಕೂಡ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ ದುಡ್ಡು ನೀಡಲ್ಲ ಎಂದು ಅಮೃತಾ ಹೇಳಿದ್ದಳಂತೆ. ಇದೇ ಕಾರಣಕ್ಕೆ ಆಕೆಗೆ ಚಾಕು ಇರಿದು ಕೊಲೆಗೈದಿರುವುದಾಗಿ ಬೆಳಕಿಗೆ ಬಂದಿದೆ.
ಜು.13ರಂದು ಬೆಂಗಳೂರಿನ ಹೆಚ್ ಎ ಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ಅಮೃತಾಗೆ ಸೂರ್ಯ ಚಾಕು ಇರಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ಜುಲೈ 15ರಂದು ಮೃತಪಟ್ಟಿದ್ದಳು.
ಅಮೃತಾ ಮತ್ತು ಆರೋಪಿ ಸೂರ್ಯ ಸಹೋದರ ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರು ಒಂದೇ ಏರಿಯಾದವರಾಗಿದ್ದರು. ಆದರೆ ಧನುಷ್ಗೆ ಅದಾಗಲೇ ಮದುವೆಯಾಗಿ 1 ಮಗುವಿದ್ದು, ಪತ್ನಿಯಿಂದ ಆತ ವಿಚ್ಛೇದನ ಪಡೆದಿದ್ದ. ಆದರೆ ಈ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ. ಈ ವಿಷಯ ಗೊತ್ತಾದ ಬಳಿಕ ಧನುಷ್ನಿಂದ ಅಮೃತಾ ದೂರವಾಗಿದ್ದಳು. ಅಲ್ಲದೇ ಮದುವೆಗೆ ನಿರಾಕರಿಸಿದ್ದಳು ಎಂದು ತಿಳಿದುಬಂದಿದೆ.

