ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪ ತೀವ್ರಗೊಂಡಿದ್ದು, ರಾಜಕೀಯ ಹಾಗೂ ವೈಯಕ್ತಿಕವಾಗಿ ದೂಷಣೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಭಷ್ಟ್ರಾಚಾರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಡಿಎಲ್ಎಫ್ ಗೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ. “ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯನ್ನು ಮಾತನಾಡಿದ ಶಾಸಕ ಹೆಚ್. ಸಿ ಬಾಲಕೃಷ್ಣ, ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು. ಕುಮಾರಸ್ವಾಮಿ ಅವರು ಈ ಯೋಜನೆ ಮಾಡುವಾಗ ಡಿಸಿಎಂ ಆಗಿದ್ದು ಯಡಿಯೂರಪ್ಪನವರು. ಕನಿಷ್ಠ ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಭೆ ಮಾಡಲಿಲ್ಲ. ಶಿವಕುಮಾರ್ ಅವರು ಕಿಕ್ ಬ್ಯಾಕ್ ಪಡೆದು ಕೇಂದ್ರದ ನಾಯಕರಿಗೆ ಕಳುಹಿಸುತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಆರೋಪಿಸಿದ್ದಾರೆ. ಡಿಎಲ್ಎಫ್ ಗೆ ಜಾಗತಿಕ ಟೆಂಡರ್ ನೀಡುವಾಗ ಕುಮಾರಸ್ವಾಮಿ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು? ಡಿಎಲ್ಎಫ್ ಅವರು ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಾಗತಿಕ ಮುಗ್ಗಟ್ಟಿನಲ್ಲಿ ಈ ಯೋಜನೆ ಮಾಡುವುದು ಅಸಾಧ್ಯ ಎಂದು ಡಿಎಲ್ಎಫ್ ಹಿಂದಕ್ಕೆ ಸರಿದಾಗ ಇವರು 400 ಕೋಟಿ ಹಣ ವಾಪಸ್ ನೀಡಿದಾಗ ಯಡಿಯೂರಪ್ಪನವರು ಎಷ್ಟು ಕಿಕ್ ಬ್ಯಾಕ್ ಪಡೆದರು? ಅದರಲ್ಲಿ ಅವರ ಕೇಂದ್ರದ ನಾಯಕರಿಗೆ ಎಷ್ಟು ಪಾಲು ನೀಡಿದರು? ಎಂದು ಪ್ರಶ್ನಿಸಿದರು.
2019ರಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಟೌನ್ ಶಿಪ್ ಭೂಮಿಯನ್ನು ಹಸ್ತಾಂತರ ಮಾಡಿದರು. ಆಗ ಕೈಗಾರಿಕಾ ಸಚಿವರಾಗಿದ್ದವರು ಜಗದೀಶ್ ಶೆಟ್ಟರ್ ಅವರು. ಈ ಸಂದರ್ಭದಲ್ಲಿ ಕಿಕ್ ಬ್ಯಾಕ್ ಪಡೆದು ಈ ಭೂಮಿಯನ್ನು ಕೆಐಎಡಿಬಿಗೆ ನೀಡಿದ್ದಾರೆ ಎಂದು ಇದೇ ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು. ನಾಲ್ಕೈದು ವರ್ಷಗಳ ಹಿಂದೆ ಕೇವಲ 80 ಲಕ್ಷದಿಂದ 1 ಕೋಟಿವರೆಗೆ ಭೂಮಿ ಪಡೆದಿದ್ದರು. ಈಗ ನಮ್ಮ ಸರ್ಕಾರ 2.50 ಕೋಟಿವರೆಗೂ ಪರಿಹಾರ ನೀಡುತ್ತಿದೆ. ಆ ಸಂದರ್ಭದಲ್ಲಿ ನಾನು ಮಾಜಿ ಶಾಸಕನಾಗಿ ಸ್ಥಳಕ್ಕೆ ಹೋಗಿ ಹೋರಾಟ ಮಾಡಿದೆ. ಈ ಭಾಗವನ್ನು ಕೆಂಪು ವಲಯದಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆ ಎಂದು ಯಡಿಯೂರಪ್ಪನವರ ಬಳಿ ನಿಯೋಗ ತೆಗೆದುಕೊಂಡು ಹೋಗಿ ಮನವಿ ನೀಡಿದ್ದೆ ಎಂದು ತಿಳಿಸಿದರು.
ಈಗ ಹಸಿರು ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿರುವ ಯಡಿಯೂರಪ್ಪನವರು ನಂತರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಿ ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ನಂತರ 18-05-2021ರಂದು ಯಡಿಯೂರಪ್ಪನವರು ಅಧಿಸೂಚನೆ ಹೊರಡಿಸಿ, ಬೆಂಗಳೂರಿನ ಸಮೀಪ ಹೂಡಿಕೆ ಸಾಧ್ಯತೆ ಇರುವುದರಿಂದ ಟೌನ್ ಶಿಪ್ ಗಳ ಅಗತ್ಯವಿರುತ್ತದೆ. ಅದಕ್ಕೆ ಈ 9 ಸಾವಿರ ಎಕರೆ ಭೂಮಿ ಟೌನ್ ಶಿಪ್ ಯೋಜನೆಗೆ ಸೂಕ್ತವಾಗಿರುತ್ತದೆ ಎಂದು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುಖ್ಯ ಕಾರ್ಯದರ್ಶಿಗಳು ತೀರ್ಮಾನ ಮಾಡಿದರು. 35% ಕೈಗಾರಿಕೆ, 35% ವಸತಿಗಾಗಿ ಹಾಗೂ ಉಳಿದ ಪ್ರದೇಶವನ್ನು ಇತರೆ ಕಾಮಗಾರಿಗಳಿಗೆ ಬಳಿಸಿ ಟೌನ್ ಶಿಪ್ ಯೋಜನೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಂತರ ಬಂದ ಬೊಮ್ಮಾಯಿ ಅವರು ಇದನ್ನು ನವನಗರ ಇಂಟಿಗ್ರೇಡೆಟ್ ಟೌನ್ ಶಿಪ್ ಮಾಡಲು ಬಜೆಟ್ ನಲ್ಲಿ ಮಂಡಿಸಿದರು ಎಂದಿದ್ದಾರೆ.
ವಿಜಯೇಂದ್ರಣ್ಣ ನೀವು ಪಶ್ಚಾತಾಪ ಯಾತ್ರೆ ಮಾಡುವ ಮುನ್ನ ನಿಮ್ಮ ತಂದೆಯವರು ಸಿಎಂ ಆಗಿದ್ದಾಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿಮ್ಮನ್ನು ಭೇಟಿ ಮಾಡಿದಾಗ ನೀವು ಏರೋನಾಟಿಕ್ ಕಂಪನಿ ಬಂಡವಾಳ ಹೂಡಿಕೆ ಮಾಡಲು ಬರುತ್ತಿದೆ. ದಯಮಾಡಿ ಗಲಾಟೆ ಮಾಡಬೇಡಿ ನಿಮಗೆ ಉತ್ತಮ ಪರಿಹಾರ ಕೊಡಿಸುತ್ತೇವೆ ಎಂದು ಹೇಳಿದ್ದನ್ನು ಮರೆತುಬಿಟ್ಟಿದ್ದೀರಾ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಸಿ.ಟಿ ರವಿ ಅವರು ರಾಜ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದು ಹೇಳಿದ್ದಾರೆ. ರವಿ ಅವರು ಈ ಮಾತನ್ನು ಯಡಿಯೂರಪ್ಪನವರಿಗೆ ಹೇಳಿದರಾ? ರವಿ ಅಣ್ಣಾ ನಿನಗೆ ಜನ ಇಟ್ಟಿರುವ ಹೆಸರೇ ಲೂಟಿ ರವಿ ಅಂತಾ. ನೀನು ವ್ಯಾಪಾರಿ ಆಗಿದ್ದಕ್ಕೆ ಚಿಕ್ಕಮಗಳೂರಿನವರು ಭಿಕಾರಿಯಾದರು. ನೀವೆಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದು, ಮಾತನಾಡುವ ಮುನ್ನ ಎಚ್ಚರವಾಗಿರಬೇಕು. ನಮ್ಮಕ್ಕ ಶೋಭಕ್ಕ ಅವರು ಬಹಳ ಚೆನ್ನಾಗಿ ಹೇಳಿದ್ದಾರೆ. ಇದು ನಿಮ್ಮ ಸಾಹೇಬರು, ಯಜಮಾನರ ಪಾಪದ ಕೂಸು ಎಂದು ತಿರುಗೇಟು ನೀಡಿದರು.
ವಿರಾವೇಶದಲ್ಲಿ ಮಾತನಾಡಿರು ಅಶೋಕಣ್ಣ, ಮಾತನಾಡುವ ಮುನ್ನ ಸಾಮಾನ್ಯ ಪ್ರಜ್ಞೆ ಇರಬೇಕು. ಈ ಯೋಜನೆ ಹಣವನ್ನು ಮೂರು ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಹೇಳಿದ್ದೀರಾ. ಈ ಯೋಜನೆ ಇವತ್ತೇ ಜಾರಿಯಾಗುತ್ತದೆಯೇ? ಈ ಟೌನ್ ಶಿಪ್ ಆಗಲು ಇನ್ನು 10 ವರ್ಷ ಬೇಕಾಗುತ್ತದೆ. ಬಿಜೆಪಿ ಜೆಡಿಎಸ್ ನವರು ಈ ಯೋಜನೆಯನ್ನು ಸರ್ಕಾರಿ ಜಾಗ ಸೇರಿಸಿ ಖಾಸಗಿಯವರಿಗೆ ನೀಡಿದ್ದರು. ಆದರೆ ನಾವು ಸರ್ಕಾರದಿಂದಲೇ ಈ ಯೋಜನೆ ಮಾಡುತ್ತಿದ್ದೇವೆ. ಯಡಿಯೂರಪ್ಪನವರ ಕಾಲದಲ್ಲಿನ ವರದಿ ಪ್ರಕಾರ ಈ ಟೌನ್ ಶಿಪ್ ನಲ್ಲಿ ಸರ್ಕಾರಕ್ಕೆ ವಾರ್ಷಿಕ 3,146 ಕೋಟಿ ಆದಾಯ ಬರುತ್ತದೆ ಎಂದು ತಿಳಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. 2020ರಲ್ಲಿ ಕಂದಾಯ ಮಂತ್ರಿಯಾಗಿದ್ದು ನೀವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

