ಬಾಲಿವುಡ್‌ನಲ್ಲಿ ಸ್ಟಾರ್ ಮಕ್ಕಳ ಚಿತ್ರಗಳಿಗೆ ಭರ್ಜರಿ ಪ್ರಚಾರ ನೀಡುವುದು ಸಾಮಾನ್ಯ. ಆದರೆ ಯಾವುದೇ ಅಬ್ಬರದ ಪ್ರಚಾರವಿಲ್ಲದೆ, ಕೇವಲ ಕಥೆ ಮತ್ತು ಸಂಗೀತದ ಮೂಲಕವೇ ಬಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾ ‘ಸೈಯಾರಾ’. ನವ ನಟರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಪ್ರೇಮಕಾವ್ಯ ಬಿಡುಗಡೆಯಾಗಿ ಇಂದಿಗೆ ಭರ್ತಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಯಶಸ್ಸು ಮತ್ತು ಪ್ರಚಾರದ ತಂತ್ರಗಳ ಕುರಿತು ನಿರ್ದೇಶಕ ಮೋಹಿತ್ ಸೂರಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಬಿಡುಗಡೆಗೂ ಮುನ್ನ ನಾಯಕ-ನಾಯಕಿಯನ್ನು ಮಾಧ್ಯಮಗಳ ಮುಂದೆ ತರದೆ ರಹಸ್ಯವಾಗಿಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಮೋಹಿತ್ ಸೂರಿ, ಇತ್ತೀಚಿನ ದಿನಗಳಲ್ಲಿ ಅತಿಯಾದ ಪ್ರಚಾರಕ್ಕಿಂತ ಕಂಟೆಂಟ್ ಮುಖ್ಯವಾಗುತ್ತದೆ. ಆರಂಭದಲ್ಲಿ ನಮಗೆ ದೊಡ್ಡ ಮಟ್ಟದ ಮಾರ್ಕೆಟಿಂಗ್ ಬಜೆಟ್ ಇರಲಿಲ್ಲ. ಆದ್ದರಿಂದ ನಾವು ಕೇವಲ ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೇಲಷ್ಟೇ ಗಮನ ಹರಿಸಿದೆವು. ಹತ್ತು ಪ್ರಚಾರದ ವಿಡಿಯೋಗಳಿಗಿಂತ ಒಂದೇ ಒಂದು ಪ್ರೋಮೋ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಂತೆ ಮಾಡಬೇಕು ಎಂಬುದು ನಮ್ಮ ಗುರಿಯಾಗಿತ್ತು ಎಂದು ತಿಳಿಸಿದ್ದಾರೆ.
ಚಿತ್ರದ ಯಶಸ್ಸಿನ ಬಳಿಕ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ಹಿಂದೆ ಮೋಹಿತ್ ಸೂರಿ ಅವರ ‘ಆಶಿಕಿ ೨’ ಚಿತ್ರದ ಸಂದರ್ಭದಲ್ಲೂ ಆದಿತ್ಯ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಜೋಡಿಯ ಬಗ್ಗೆ ಇಂತಹುದೇ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಚಿತ್ರದ ಜೋಡಿಗಳು ನಿಜ ಜೀವನದಲ್ಲಿ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ತೆರೆಮೇಲೆ ಅವರ ಅದ್ಭುತ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ ಎನ್ನುವುದಷ್ಟೇ ಗೊತ್ತು ಎಂದಿದ್ದಾರೆ.
ಸದ್ಯ ಸೈಯಾರಾ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಈ ಹಿಟ್ ಜೋಡಿಯನ್ನು ಇಟ್ಟುಕೊಂಡು ಮೋಹಿತ್ ಸೂರಿ ಮತ್ತೊಂದು ಹೊಸ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲೇ ಈ ಚಿತ್ರ ಮೂಡಿಬರಲಿದ್ದು, ಇದೊಂದು ಸಂಪೂರ್ಣ ಭಿನ್ನವಾದ ಹಾಗೂ ಸಂಗೀತ ಹಿನ್ನೆಲೆಯುಳ್ಳ ಪ್ರೇಮಕಥೆಯಾಗಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

