ನವದೆಹಲಿ: ಭಾರತದ ಬಾಹ್ಯಾಕಾಶ ಪಯಣದಲ್ಲಿ ಶನಿವಾರ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಕ್ರಮ್-1 ರಾಕೆಟ್‌ನ್ನು ‘ಮಿಷನ್ ಆಗಮನ’ ಅಡಿಯಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC-SHAR) ದಿಂದ ಮಧ್ಯಾಹ್ನ 12.05 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇದು ಭಾರತೀಯ ಖಾಸಗಿ ಸಂಸ್ಥೆಯೊಂದು ದೇಶದ ನೆಲದಿಂದ ಮೊದಲ ಬಾರಿಗೆ ಕಕ್ಷಾ (Orbital) ಉಡಾವಣಾ ರಾಕೆಟ್‌ನ್ನು ಉಡಾವಣೆ ಮಾಡುವ ಐತಿಹಾಸಿಕ ಪ್ರಯತ್ನವಾಗಿದ್ದು, ಜಾಗತಿಕ ವಾಣಿಜ್ಯ ಉಪಗ್ರಹ ಉಡಾವಣಾ ಮಾರುಕಟ್ಟೆಯಲ್ಲಿ ಭಾರತಕ್ಕೆ ಹೊಸ ಅಧ್ಯಾಯವನ್ನು ತೆರೆದಿದೆ.ಉಡಾವಣೆಯನ್ನು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹಾಗೂ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಶ್ರೀಹರಿಕೋಟಾದಿಂದ ವೀಕ್ಷಿಸಿದರು.
‘ಐತಿಹಾಸಿಕ ಹೊಸ ಗಡಿ’ ಎಂದ ಪ್ರಧಾನಿ ಮೋದಿ
ಉಡಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುಭಾಶಯ ತಿಳಿಸಿ, ಇದನ್ನು ಭಾರತದ ಬಾಹ್ಯಾಕಾಶ ಪಯಣದ “ಐತಿಹಾಸಿಕ ಹೊಸ ಗಡಿ” ಎಂದು ಬಣ್ಣಿಸಿದರು.
“ವಿಕ್ರಮ್-1 ಭಾರತದ ಮೊದಲ ಖಾಸಗಿ ಕಕ್ಷಾ ಉಡಾವಣಾ ವಾಹನವಾಗಿದೆ. ಈ ನಾಲ್ಕು ಹಂತಗಳ ರಾಕೆಟ್ ತ್ವರಿತ ಹಾಗೂ ಬೇಡಿಕೆಯ ಮೇರೆಗೆ ಉಡಾವಣಾ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತದ ಯುವಕರ ಪ್ರತಿಭೆ, ದೃಢ ಸಂಕಲ್ಪ ಹಾಗೂ ಉದ್ಯಮಶೀಲತೆಯ ಪ್ರತೀಕವಾಗಿರುವ ಈ ಮಿಷನ್, ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಹೊಸ ಅವಕಾಶಗಳನ್ನು ಹೇಗೆ ಸೃಷ್ಟಿಸುತ್ತಿವೆ ಎಂಬುದನ್ನು ತೋರಿಸುತ್ತದೆ. ವಿಕ್ರಮ್-1 ಇತಿಹಾಸ ನಿರ್ಮಿಸಿ, ಹೊಸ ತಲೆಮಾರಿನ ಆವಿಷ್ಕಾರಕರಿಗೆ ಸ್ಫೂರ್ತಿಯಾಗಲಿ” ಎಂದು ಪ್ರಧಾನಿ ಹಾರೈಸಿದರು.
‘ಮಿಷನ್ ಆಗಮನ’ ಎಂದರೇನು?
2022ರ ನವೆಂಬರ್‌ನಲ್ಲಿ ವಿಕ್ರಮ್-ಎಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡ ಬಳಿಕ ಸ್ಕೈರೂಟ್ ಕೈಗೊಂಡಿರುವ ಎರಡನೇ ಪ್ರಮುಖ ಮಿಷನ್ ಇದಾಗಿದೆ. ವಿಕ್ರಮ್-ಎಸ್ ಭಾರತದ ಮೊದಲ ಖಾಸಗಿ ನಿರ್ಮಿತ ರಾಕೆಟ್ ಆಗಿ ಬಾಹ್ಯಾಕಾಶ ತಲುಪಿತ್ತು.ಈ ಬಾರಿ ಉಡಾವಣೆಗೆ ಮುನ್ನ ರಾಕೆಟ್‌ನ ಎಲ್ಲಾ ಹಂತಗಳ ಜೋಡಣೆ, ವಾಹನದ ಅಂತಿಮ ಪರಿಶೀಲನೆ, ಟೆಲಿಮೆಟ್ರಿ ವ್ಯವಸ್ಥೆ, ರಾಡಾರ್ ಟ್ರ್ಯಾಕಿಂಗ್ ಸೇರಿದಂತೆ ಎಲ್ಲ ತಾಂತ್ರಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಉಡಾವಣೆಗೆ ಅಗತ್ಯವಾದ ವಾಯು ಮತ್ತು ಸಮುದ್ರ ಮಾರ್ಗದ ಅನುಮತಿಗಳನ್ನೂ ಪಡೆದುಕೊಳ್ಳಲಾಗಿತ್ತು.
ಸ್ವದೇಶಿ ತಂತ್ರಜ್ಞಾನದ ಶಕ್ತಿ
ಏಳು ಅಂತಸ್ತಿನ ಕಟ್ಟಡದಷ್ಟು ಎತ್ತರ ಹೊಂದಿರುವ ವಿಕ್ರಮ್-1 ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ರಚನೆಯೊಂದಿಗೆ ನಿರ್ಮಿತ ಬಹು ಹಂತಗಳ ಕಕ್ಷಾ ರಾಕೆಟ್ ಆಗಿದೆ.ಇದರಲ್ಲಿ ಸ್ಕೈರೂಟ್ ಸಂಸ್ಥೆಯೇ ಅಭಿವೃದ್ಧಿಪಡಿಸಿರುವ 3D ಪ್ರಿಂಟ್ ಮಾಡಿದ ಲಿಕ್ವಿಡ್ ಎಂಜಿನ್, ಹೆಚ್ಚಿನ ಸಾಮರ್ಥ್ಯದ ಘನ ಇಂಧನ ಬೂಸ್ಟರ್‌ಗಳು ಹಾಗೂ ಸಂಪೂರ್ಣ ಸ್ವದೇಶಿ ಪ್ರೊಪಲ್ಷನ್ ವ್ಯವಸ್ಥೆ ಅಳವಡಿಸಲಾಗಿದೆ.ಈ ರಾಕೆಟ್ 350 ಕಿಲೋಗ್ರಾಂ ತೂಕದ ಉಪಗ್ರಹಗಳನ್ನು ಭೂಮಿಯ ತಗ್ಗು ಕಕ್ಷೆ (LEO)ಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು, ಮೊದಲ ಪ್ರಯೋಗದಲ್ಲಿ 450 ಕಿ.ಮೀ. ಎತ್ತರದ 60 ಡಿಗ್ರಿ ಇನ್‌ಕ್ಲಿನೇಷನ್ ಕಕ್ಷೆ ಗುರಿಯಾಗಿಸಲಾಗಿದೆ.
ಇದೇ ಮೊದಲ ಬಾರಿಗೆ ಸಂಪೂರ್ಣ ಕಾರ್ಬನ್ ಕಾಂಪೋಸಿಟ್‌ನಿಂದ ನಿರ್ಮಿಸಲಾದ ಭಾರತದ ಕಕ್ಷಾ ಉಡಾವಣಾ ವಾಹನವಾಗಿದೆ. ಇದರಲ್ಲಿರುವ ದೇಶದ ಅತಿದೊಡ್ಡ ಏಕಘಟಕ ಕಾರ್ಬನ್ ರಾಕೆಟ್ ಹಂತ, 3D ಮುದ್ರಿತ ಲಿಕ್ವಿಡ್ ಎಂಜಿನ್ ಮತ್ತು ಅತ್ಯಾಧುನಿಕ ಪೇಲೋಡ್ ಬೇರ್ಪಡಿಸುವ ವ್ಯವಸ್ಥೆಗಳು ವಿಶೇಷತೆಗಳಾಗಿವೆ.
ರಾಕೆಟ್‌ನಲ್ಲಿರುವ ವಿಶೇಷ ಪೇಲೋಡ್‌ಗಳು
ವಿಕ್ರಮ್-1 ತನ್ನ ಮೊದಲ ಮಿಷನ್‌ನಲ್ಲಿ Grahaa Space, Cosmoserve, DCubed ಹಾಗೂ ಸ್ಕೈರೂಟ್‌ನ SCOPE ವೇದಿಕೆಯ ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳನ್ನು ಹೊತ್ತೊಯ್ದಿದೆ.ಇದರ ಜೊತೆಗೆ Cosmos Diamonds ಸಂಸ್ಥೆಯ ಪ್ರಯೋಗಾಲಯದಲ್ಲಿ ತಯಾರಿಸಲಾದ ‘Cosmic Bloom’ ವಜ್ರ, ಡಾ. ವಿಕ್ರಂ ಸಾರಾಭಾಯಿ, ಸರ್ ಸಿ.ವಿ. ರಾಮನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸೂಕ್ಷ್ಮ ಶಿಲ್ಪಗಳನ್ನು ಚಿನ್ನದ ಸಣ್ಣ ರಾಕೆಟ್‌ನಲ್ಲಿ ಅಳವಡಿಸಿದ ಕಲಾಕೃತಿಯೂ ಪೇಲೋಡ್‌ನ ಭಾಗವಾಗಿದೆ.
ಪ್ರಧಾನಿ ಮೋದಿ ಅವರ ‘ವಂದೇ ಮಾತರಂ’ ಸಂದೇಶವಿರುವ ಕಾರ್ಡ್ ಹಾಗೂ ವಿಶ್ವದ ವಿವಿಧ ಭಾಗಗಳಿಂದ ಬಂದ ಶುಭಾಶಯ ಸಂದೇಶಗಳನ್ನೂ ಈ ಮಿಷನ್ ಹೊತ್ತೊಯ್ಯುತ್ತಿದೆ.ಅದರೊಂದಿಗೆ, ವಿಕ್ರಮ್-1 ನಿರ್ಮಾಣದಲ್ಲಿ ಪಾಲ್ಗೊಂಡ ಇಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಸಿಬ್ಬಂದಿಯ ಸಹಿಗಳನ್ನು ಸಹ ರಾಕೆಟ್‌ನಲ್ಲಿ ಅಳವಡಿಸಲಾಗಿದ್ದು, ಮಿಷನ್‌ಗೆ ದುಡಿದ ತಂಡಕ್ಕೆ ಗೌರವ ಸಲ್ಲಿಸಲಾಗಿದೆ.
ಬಾಹ್ಯಾಕಾಶ ಕಸದ ನಿವಾರಣೆಗೆ ಹೊಸ ಹೆಜ್ಜೆ
ಈ ಮಿಷನ್‌ನಲ್ಲಿ EMBRACE ಎಂಬ ವಿಶೇಷ ಪೇಲೋಡ್ ಕೂಡ ಇದ್ದು, ಭವಿಷ್ಯದಲ್ಲಿ ಬಾಹ್ಯಾಕಾಶ ಕಸ (Space Debris) ತೆರವುಗೊಳಿಸಲು ಬಳಸಬಹುದಾದ ರೋಬೋಟಿಕ್ ಆರ್ಮ್ ತಂತ್ರಜ್ಞಾನವನ್ನು ಪರೀಕ್ಷಿಸುವ ಉದ್ದೇಶ ಹೊಂದಿದೆ.
ಸ್ಕೈರೂಟ್ ಸಂಸ್ಥೆಯ ವಿಶ್ವಾಸ
ಸ್ಕೈರೂಟ್ ಸಹ-ಸಂಸ್ಥಾಪಕ ಹಾಗೂ ಸಿಇಒ ಪವನ್ ಕುಮಾರ್ ಚಂದನಾ ಮಾತನಾಡಿ, “ವಿಕ್ರಮ್-1ಗೆ ಸಂಬಂಧಿಸಿದಂತೆ ನೆಲಮಟ್ಟದಲ್ಲಿ ನಡೆಸಬಹುದಾದ ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದೇವೆ. ಇದು ನಮ್ಮ ಮೊದಲ ಪರೀಕ್ಷಾ ಉಡಾವಣೆಯಾಗಿದ್ದು, ಇದರಿಂದ ದೊರೆಯುವ ಮಾಹಿತಿಯು ಮುಂದಿನ ಉಡಾವಣೆಗಳಿಗೆ ಭದ್ರ ಅಡಿಪಾಯವಾಗಲಿದೆ” ಎಂದು ಹೇಳಿದರು. ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯಾಚರಣಾಧಿಕಾರಿ ನಾಗ ಭರತ್ ಡಾಕಾ ಅವರು, “ಈ ಪರೀಕ್ಷಾ ಉಡಾವಣೆ ಭಾರತದಿಂದ ವಿಶ್ವಕ್ಕೆ ವಿಶ್ವಾಸಾರ್ಹ, ಬೇಡಿಕೆಯ ಮೇರೆಗೆ ಉಡಾವಣಾ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿ ಬೆಳೆಯುವ ಮೊದಲ ಹೆಜ್ಜೆಯಾಗಿದೆ” ಎಂದು ತಿಳಿಸಿದ್ದಾರೆ.

