ಕಲಬುರಗಿ: ಹಳೆ ಪ್ರಕರಣವೊಂದರಲ್ಲಿ ರಾಜಿ ಅರ್ಜಿ ಸಲ್ಲಿಸಲು ಲಂಚ ಕೇಳಿದ ಆರೋಪದ ಮೇಲೆ 5ನೇ ಜೆಎಂಎಫ್‌ಸಿ ಕೋರ್ಟ್‌ನ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ)ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಸಂತೋಷ್ ಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಎಪಿಪಿ. ಹೈದರಾಬಾದ್ ಮೂಲದ ಬಟ್ಟೆ ವ್ಯಾಪಾರಿ ರಾಹುಲ್ ಮಾರಾಜೋ ಎಂಬುವರ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಸಲು ಎಪಿಪಿ ಸಂತೋಷ್ ಕುಮಾರ್ 10 ಸಾವಿರ ರೂಪಾಯಿ ಹಣದ ಜೊತೆಗೆ ಸೀರೆ, ಶರ್ಟ್, ಶೂ, ಮಹಿಳೆಯರ ಚಪ್ಪಲಿ ಸೇರಿ ವಿವಿಧ ವಸ್ತುಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚವಾಗಿ ಇವುಗಳನ್ನು ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಎಪಿಪಿ ಲಂಚದ ಲಿಸ್ಟ್ ಹೀಗಿದೆ:
ಲಂಚವಾಗಿ 10 ಸಾವಿರ ರೂಪಾಯಿ ನಗದು ಹಣದಜೊತೆಗೆ,
- 9 ಸೀರೆಗಳು
- 4 ಶರ್ಟ್‌ಗಳು
- 4 ಲಂಡನ್ ಜೀನ್ಸ್ ಪ್ಯಾಂಟ್
- 1 ಜೊತೆ ಶೂ
- 4 ಮಹಿಳೆಯರ ಉಡುಗೆಗಳು
- 6 ಜೊತೆ ಮಹಿಳೆಯರ ಚಪ್ಪಲಿಗಳನ್ನು ಕೇಳಿದ್ದರು.
ಈ ಬಗ್ಗೆ ರಾಹುಲ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಸಿ.ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣ್‌ಕುಮಾರ್ ಮುರುಗುಂಡಿ ನೇತೃತ್ವದ ತಂಡ ದಾಳಿ ನಡೆಸಿ ಎಪಿಪಿ ಅವರನ್ನು ಬಂಧಿಸಿದೆ.
2025ರ ಡಿಸೆಂಬರ್ 30 ರಂದು ಕೂಡ ಇದೇ ರೀತಿ ಕಲಬುರಗಿ 2ನೇ ಪಿಡಿಜೆ ಕೋರ್ಟ್‌ನ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಅವರು 50 ಸಾವಿರ ರೂಪಾಯಿ ಲಂಚ ಕೇಳಿ, 25 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದರು.

