ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದ ಭೀಕರ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಯುವತಿಯನ್ನು ಬಸ್‌ನಿಂದ ಇಳಿಯುವಂತೆ ಮಾಡಿ ಬೆನ್ನಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಸಾರ್ವಜನಿಕರ ಎದುರಲ್ಲೇ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಯುವತಿಯನ್ನು ಲಾವಣ್ಯ (21) ಎಂದು ಗುರುತಿಸಲಾಗಿದೆ., ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಲಾವಣ್ಯ ಕೆಲಸ ಮಾಡುತ್ತಿದ್ದರು. ಕರ್ತವ್ಯ ಮುಗಿಸಿ ಊರಿಗೆ ತೆರಳಲು ಬಸ್ ಹತ್ತಿದ್ದ ವೇಳೆ, ದೂರದ ಸಂಬಂಧಿಯಾಗಿರುವ ಚೇತನ್ (22) ಎಂಬಾತ ಆಕೆಯನ್ನು ಹಿಂಬಾಲಿಸಿದ್ದಾನೆ.
ಪ್ರೀತಿ ಹೆಸರಿನಲ್ಲಿ ಕಿರುಕುಳ
ಪ್ರಾಥಮಿಕ ತನಿಖೆಯ ಪ್ರಕಾರ, ಚೇತನ್ ಕೆಲ ದಿನಗಳಿಂದ ಲಾವಣ್ಯಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗುರುವಾರ ಮಧ್ಯಾಹ್ನವೂ ಆತ ಅದೇ ಬಸ್‌ಗೆ ಹತ್ತಿ ಯುವತಿಯ ಪಕ್ಕದಲ್ಲೇ ಕುಳಿತಿದ್ದನು. ಬಸ್‌ನಲ್ಲಿ ತನ್ನ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಒಬ್ಬ ಯುವಕ ಕುಳಿತಿದ್ದಾನೆ ಎಂದು ಲಾವಣ್ಯ ತನ್ನ ಸಂಬಂಧಿಕರಿಗೆ ಫೋನ್ ಮೂಲಕ ತಿಳಿಸಿದ್ದಾಳೆ ಎನ್ನಲಾಗಿದೆ.
ಬಸ್‌ನಿಂದ ಇಳಿದು ಓಡಿದಯುವತಿ
ಸ್ವಲ್ಪ ಹೊತ್ತಿನ ಬಳಿಕ ಚೇತನ್ ತನ್ನ ಬ್ಯಾಗಿನಿಂದ ಮಾರಕಾಸ್ತ್ರವನ್ನು ಹೊರತೆಗೆದಿದ್ದಾನೆ. ಇದನ್ನು ಕಂಡು ಭಯಗೊಂಡ ಲಾವಣ್ಯ ಬಸ್‌ನಿಂದ ಇಳಿದು ಓಡಲು ಆರಂಭಿಸಿದ್ದಾಳೆ. ಆದರೆ ಆರೋಪಿಯು ಆಕೆಯನ್ನು ಬೆನ್ನಟ್ಟಿ ಹಿಡಿದು ತಲೆಗೆ ಹಲವು ಬಾರಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.ತೀವ್ರ ಗಾಯಗೊಂಡ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆಲವೇ ಗಂಟೆಗಳಲ್ಲಿಆರೋಪಿ ಬಂಧನ
ಈ ಘಟನೆಯನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಾಗಿ ಶೋಧ ನಡೆಸಿದ್ದರು. ಕೆಲವೇ ಗಂಟೆಗಳಲ್ಲಿ ಮಂಗಳೂರು ಸಮೀಪದ ವಾಮಂಜೂರು ಬಳಿಯ ಪಚ್ಚನಾಡಿ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿ ವಿಷ ಸೇವಿಸಿದ್ದಾನೆ ಎಂಬ ಮಾಹಿತಿ ಹಿನ್ನೆಲೆ, ಆತನನ್ನು ಚಿಕಿತ್ಸೆ ಮತ್ತು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

