ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರು ತಲೆದೂಗಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯ ಎದುರು ಅಸಭ್ಯವಾಗಿ ವರ್ತಿಸಿ, ಬೆತ್ತಲೆ ಪ್ರದರ್ಶನ ನೀಡಿದ ಕಾಮುಕನೊಬ್ಬನನ್ನು ಮಹಿಳಾ ಪೊಲೀಸ್ ಪೇದೆಯೊಬ್ಬರು ರಸ್ತೆಯಲ್ಲೇ ಹಿಡಿದು ಸಾರ್ವಜನಿಕವಾಗಿ ಬುದ್ಧಿ ಕಲಿಸಿದ್ದಾರೆ. ನಾಗರಿಕ ಉಡುಪಿನಲ್ಲಿದ್ದ ಪೇದೆ ಆತನ ಕಾಲರ್ ಹಿಡಿದು ಸುಮಾರು 400 ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಘಟನೆಯ ವಿವರ:
ಬಿಟಿ ರಸ್ತೆಯ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಹಿಳಾ ಕಾನ್‌ಸ್ಟೆಬಲ್ ಅವರು ಕರ್ತವ್ಯ ಮುಗಿಸಿ ನಾಗರಿಕ ಉಡುಪಿನಲ್ಲಿ ತಮ್ಮ ಸ್ಕೂಟರ್ ಮೇಲೆ ಮನೆಗೆ ಮರಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯನ್ನು ನೋಡಿ ಅಸಭ್ಯ ಸನ್ನೆಗಳನ್ನು ಮಾಡಿದ್ದಲ್ಲದೆ, ತನ್ನ ಬಟ್ಟೆ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದಾನೆ. ಆದರೆ ತಾನು ಚೇಷ್ಟೆ ಮಾಡುತ್ತಿರುವುದು ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಎದುರು ಎಂಬ ಕನಿಷ್ಠ ಜ್ಞಾನವೂ ಆ ಕಾಮುಕನಿಗೆ ಇರಲಿಲ್ಲ.
ಖಡಕ್ ಆಕ್ಷನ್ ತಗೊಂಡ ಲೇಡಿ ಸಿಂಗಂ:
ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಮಹಿಳೆಯರು ಮುಜುಗರದಿಂದ ಅಲ್ಲಿಂದ ಹೊರಟುಹೋಗುತ್ತಾರೆ. ಆದರೆ ಈ ಪೇದೆ ಧೈರ್ಯಗೆಡದೆ ತಕ್ಷಣವೇ ಸ್ಕೂಟರ್ ನಿಲ್ಲಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಕಾಮುಕನ ಕಾಲರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ರಸ್ತೆಯಲ್ಲೇ ಸುಮಾರು 400 ಮೀಟರ್ ನಡೆಸಿ ಹತ್ತಿರದ ಖರ್ದಾ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ.
ರಸ್ತೆಯಲ್ಲಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಕಾಲರ್ ಹಿಡಿದು ಎಳೆದುಕೊಂಡು ಹೋಗುತ್ತಿದ್ದ ಈ ಅಪರೂಪದ ದೃಶ್ಯವನ್ನು ಕಂಡು ದಾರಿಹೋಕರು ಮತ್ತು ಸ್ಥಳೀಯ ವ್ಯಾಪಾರಿಗಳು ಬೆಕ್ಕಸಬೆರಗಾಗಿದ್ದಾರೆ. ಸ್ಥಳೀಯ ಅಂಗಡಿಯವರೊಬ್ಬರು ಮಾತನಾಡಿ, ಆಕೆ ಇಡೀ ರಸ್ತೆಯುದ್ದಕ್ಕೂ ಆತನನ್ನು ಬಿಡದೆ ಅತ್ಯಂತ ದೃಢವಾಗಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.
ಆರೋಪಿ ಯಾರು?:
ಠಾಣೆಗೆ ಕರೆತಂದ ಬಳಿಕ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನನ್ನು ಆಕಾಶ್ ಘೋಷ್ ಎಂದು ಗುರುತಿಸಲಾಗಿದೆ. ಈತ ಆನ್‌ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಂತ್ರಸ್ತೆ ಮಹಿಳಾ ಪೊಲೀಸ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
A Delivery agent who harassed a woman in Khardah, West Bengal, learned a tough lesson when she turned out to be an off-duty police constable. She caught him red-handed, grabbed him by the collar, and marched him straight to the local police station. 👊🚔#Viralvideo pic.twitter.com/0SVMkODnUr
— Gummalla Lakshmana (@GUMMALLALAKSHM3) July 15, 2026

