ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್ನಲ್ಲಿ ಬೀದಿ ನಾಯಿಗಳ ದಾಳಿಗೆ ಪುಟ್ಟ ಬಾಲಕಿ ಬಲಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಹೊಸಪೇಟೆ ಮೂಲದ ಅಬ್ದುಲ್ ರಜಾಕ್ ಅವರ ಪುತ್ರಿ ಅನಂ ಎಂದು ಗುರುತಿಸಲಾಗಿದೆ.
ಕುಟುಂಬವೊಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪ್ನಲ್ಲಿ ತಂಗಿತ್ತು. ಮಗು ಜೋಳಿಗೆಯಲ್ಲಿ ಮಲಗಿದ್ದ ವೇಳೆ ಎಚ್ಚರಗೊಂಡು ಕೆಳಗಿಳಿದು ಮನೆಯ ಸಮೀಪ ಆಟವಾಡಲು ಆರಂಭಿಸಿತ್ತು. ಇದೇ ವೇಳೆ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಮಗುವಿನ ಚೀರಾಟ ಕೇಳಿ ಪೋಷಕರು ಹೊರಗೆ ಓಡಿ ಬಂದರೂ, ಅಷ್ಟರಲ್ಲಾಗಲೇ ನಾಯಿಗಳು ಆನಂಳನ್ನು ತೀವ್ರವಾಗಿ ಕಚ್ಚಿ ಗಂಭೀರ ಗಾಯಗೊಳಿಸಿದ್ದವು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೊತೆಗೆ, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

