ಧಾರವಾಡ : ಧಾರವಾಡದಲ್ಲಿ ಖಾಸಗಿ ಆಸ್ಪತ್ರೆಯ ಅನೆಸ್ಥೀಷಿಯಾ ತಜ್ಞ ಡಾ. ಡಾ. ಕಿರಣ್ ಹೊನ್ನಣ್ಣ(45) ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಅವರ 8 ವರ್ಷದ ಪುತ್ರ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪತ್ನಿ ಡಾ. ಪ್ರಿಯಾಂಕಾಗದ್ದನಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಗರದ ಬಾರಾಕ್ರೋಟ್ರಿಯ ರಂಕಾ ಸ್ಪೆಲೋ ಅಪಾರ್ಟ್ ಮೆಂಟ್ ನ ಆರನೇ ಮಹಡಿಯ ಮನೆಯ ಕೋಣೆಯಲ್ಲಿ ಈ ಘಟನೆ ನಡೆದಿದೆ. , ಡಾ. ಕಿರಣ್ ಹೊನ್ನಣ್ಣ ಅವರನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ರ ನಿಹಿತ್ ರಕ್ತದ ಮಡುವಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಪ್ರಕಾರ, ಹತ್ಯೆ ನಡೆದ ನಿಖರ ಸಮಯ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಮುನ್ನ ಡಾ. ಕಿರಣ್ ಅವರ ಬಂಧುಗಳು ಮತ್ತು ಸ್ನೇಹಿತರು ಕರೆ ಮಾಡಿದಾಗ ಪತ್ನಿ, “ಅವರು ಬ್ಯುಸಿಯಾಗಿದ್ದಾರೆ” ಅಥವಾ “ಆಸ್ಪತ್ರೆಗೆ ಹೋಗಿದ್ದಾರೆ” ಎಂದು ಉತ್ತರಿಸಿದ್ದಾರೆ, ನೆರೆಹೊರೆಯವರು ಕರೆ ಮಾಡಿದಾಗ “ನಾನು ಮನೆಯಲ್ಲಿದ್ದೇನೆ, ಪತಿ ಹೊರಗೆ ಹೋಗಿದ್ದಾರೆ” ಎಂದು ಹೇಳಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಡಾ. ಕಿರಣ್ ಅವರ ಕುಟುಂಬದವರು ಈ ಹತ್ಯೆಯಲ್ಲಿ ಪತ್ನಿಯ ಪಾತ್ರವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಅವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಸ್ತುತ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ನಂತರವೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಸಿಸಿಟಿವಿ ವ್ಯವಸ್ಥೆ ಇರುವುದರಿಂದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹೊರಗಿನಿಂದ ಅಪರಿಚಿತರು ಪ್ರವೇಶಿಸಿರುವ ಸಾಧ್ಯತೆ ಕಡಿಮೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಕೊಲೆ ಬಳಿಕ ಮೊಬೈಲ್ ನೋಡುತ್ತಾ ಕುಳಿತಿದ್ದ ಪತ್ನಿ
ವೈದ್ಯ ಡಾ. ಕಿರಣ್ ಹೊನ್ನಣ್ಣವರ್ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಪತಿಯನ್ನು ಚಾಕುವಿನಿಂದ ಹತ್ಯೆ ಮಾಡಿದ ಬಳಿಕ ರಕ್ತದ ಮಡುವಿನಲ್ಲೇ ಬಿದ್ದಿದ್ದ ಅವರ ಶವದ ಸಮೀಪ ಪತ್ನಿ ಡಾ. ಪ್ರಿಯಾಂಕಾ ಮೊಬೈಲ್ ನೋಡುತ್ತಾ ಕುಳಿತಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಒಂದು ಕೊಠಡಿಯಲ್ಲಿ ಡಾ. ಕಿರಣ್ ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮತ್ತೊಂದು ಕಡೆ ಅವರ ಎಂಟು ವರ್ಷದ ಪುತ್ರ ಗಾಯಗೊಂಡು ಜೀವಕ್ಕಾಗಿ ಹೋರಾಡುತ್ತಿದ್ದರೆ, ಪತ್ನಿ ಪ್ರಿಯಾಂಕಾ ಮೊಬೈಲ್ನಲ್ಲಿ ನಿರತರಾಗಿದ್ದಳು ಎನ್ನಲಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

