ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗಾಗಿ ನಾವು ಮುಂಚಿತವಾಗಿಯೇ ಎನ್ಡಿಆರ್ಎಫ್ ಅನುದಾನವನ್ನು ಒಂದಿಷ್ಟಾದರೂ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಅಗತ್ಯ ನೆರವು ನೀಡುವಂತೆ ಕೋರಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು, ನಾನು ಹಾಗೂ ಎಲ್ಲ ಸಚಿವರುಗಳು ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ನೀಡುತ್ತೇವೆ. ಆದರೆ ಅದಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎನ್ಡಿಆರ್ಎಫ್ನಿಂದ ಮುಂಗಡ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
ಬರಗಾಲ ಪೀಡಿತ ಪ್ರದೇಶ ಎಂದು ಯಾವಾಗ ಘೋಷಣೆ ಮಾಡುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಲಭ್ಯತೆ, ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಜೊತೆಗೆ ರಾಜ್ಯದ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ, ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಎಷ್ಟಿದೆ ಎಂಬ ವಿವರಗಳನ್ನೂ ಒಂದು ವಾರದೊಳಗೆ ನೀಡುವಂತೆ ನಿರ್ದೇಶಿಸಲಾಗಿದೆ. ಆ ವರದಿ ಬಂದ ಬಳಿಕ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸೂಚನೆಗಳಾದ ಮಳೆಯ ಪ್ರಮಾಣ, ಮಳೆ ಕೊರತೆ, ಮಣ್ಣಿನ ತೇವಾಂಶ, ಹವಾಮಾನ ಇಲಾಖೆ ವರದಿ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ಬರ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂದುವರೆದು, ಯಾವುದೇ ಜಿಲ್ಲೆ ಅಥವಾ ತಾಲ್ಲೂಕನ್ನು ಬೇಕಾಬಿಟ್ಟಿ ಬರಪೀಡಿತ ಪ್ರದೇಶ ಎಂದು ಘೋಷಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಮಾನದಂಡಗಳ ಆಧಾರದ ಮೇಲೆಯೇ ನಾವು ಒಂದು ಜಿಲ್ಲೆ ಅಥವಾ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದಾಗಿದೆ ಎಂದರು.

