ಬೆಂಗಳೂರು: ಫಿಫಾ ವಿಶ್ವಕಪ್ 2026 (FIFA World Cup 2026) ಟೂರ್ನಿ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮನೆಮಾಡಿದೆ. ಜುಲೈ 14ರಂದು ಫ್ರಾನ್ಸ್ ಹಾಗೂ ಸ್ಪೇನ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಿಂದ ನಾಕೌಟ್ ಹಂತದ ರೋಚಕ ಪೈಪೋಟಿ ಆರಂಭವಾಗಿದೆ.
ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಜುಲೈ 15ರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ. ಈ ತಡರಾತ್ರಿ ಪಂದ್ಯಗಳನ್ನು ವೀಕ್ಷಿಸಲು ಬಯಸುವ ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ.
ಬೆಳಗಿನ ಜಾವ 3:30ರವರೆಗೆ ಹೋಟೆಲ್ಗಳಿಗೆ ಅನುಮತಿ
ಬೆಂಗಳೂರು ನಗರದಲ್ಲಿನ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳನ್ನು ಜುಲೈ 15 ಮತ್ತು 19ರಂದು ಬೆಳಗಿನ ಜಾವ 3:30ರವರೆಗೆ ತೆರೆದಿಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ನೇರಪ್ರಸಾರವನ್ನು ದೊಡ್ಡ ಪರದೆಗಳಲ್ಲಿ ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಈ ವಿಶೇಷ ಸಡಿಲಿಕೆ ನೀಡಲಾಗಿದೆ.
ರೆಸ್ಟೋರೆಂಟ್ ಅಸೋಸಿಯೇಷನ್ ಮನವಿಗೆ ಸರ್ಕಾರದ ಗ್ರೀನ್ ಸಿಗ್ನಲ್
ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ರಾತ್ರಿ 1 ಗಂಟೆಗೆ ಮುಚ್ಚುವ ಹೋಟೆಲ್ಗಳು ಹಾಗೂ ಆಹಾರ ಸೇವಾ ಕೇಂದ್ರಗಳು ಈ ಮೂರು ದಿನಗಳ ಕಾಲ ಮಾತ್ರ ಬೆಳಗಿನ ಜಾವ 3:30ರವರೆಗೆ ಕಾರ್ಯನಿರ್ವಹಿಸಬಹುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಫುಟ್ಬಾಲ್ ವಿಶ್ವದ ಕೋಟ್ಯಂತರ ಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಕ್ರೀಡೆಯಾಗಿದ್ದು, ಅಭಿಮಾನಿಗಳು ಈ ಸಂಭ್ರಮವನ್ನು ಒಟ್ಟಾಗಿ ಅನುಭವಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಜವಾಬ್ದಾರಿಯಿಂದ ಪಂದ್ಯ ವೀಕ್ಷಿಸಿ: ಡಿ.ಕೆ. ಶಿವಕುಮಾರ್
ಈ ಸಡಿಲಿಕೆ ನೀಡಿದ್ದರೂ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಧ್ಯರಾತ್ರಿ ಪಂದ್ಯಗಳನ್ನು ವೀಕ್ಷಿಸುವ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ವರ್ತಿಸಬೇಕು. ಅಭಿಮಾನಿಗಳು ಜವಾಬ್ದಾರಿಯುತವಾಗಿ ಪಂದ್ಯಗಳನ್ನು ಆನಂದಿಸಿ, ಪೊಲೀಸ್ ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

