ಆಗ್ರಾ: ಉತ್ತರ ಪ್ರದೇಶದ ತಾಜನಗರಿ ಆಗ್ರಾದಲ್ಲಿ ಅತ್ಯಂತ ಕುತೂಹಲಕಾರಿ ಮತ್ತು ಅಚ್ಚರಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಇಲ್ಲಿನ ಖೇರಿಯಾ ಮೋಡ್ ವ್ಯಾಪ್ತಿಯ ನಗಲಾ ಭುಜಾ ಎಂಬ ಪ್ರದೇಶದ ಮನೆಯೊಂದರ ಫ್ರಿಜ್ನಲ್ಲಿ ಮಂಜುಗಡ್ಡೆಯಿಂದ ಸಾಕ್ಷಾತ್ ಶಿವಲಿಂಗದಂತಹ ಆಕೃತಿಯೊಂದು ಸೃಷ್ಟಿಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮುಗಿಬಿದ್ದಿರುವ ನೂರಾರು ಭಕ್ತರು ಫ್ರಿಜ್ ಮುಂದೆಯೇ ನಿಂತು ಪೂಜೆ, ಪುನಸ್ಕಾರ ಹಾಗೂ ಜಲಾಭಿಷೇಕ ಆರಂಭಿಸಿದ್ದಾರೆ
ಫ್ರೀಜರ್ ಒಳಗೇ ಪೂಜೆ-ಆರತಿ; ಹರ ಹರ ಮಹಾದೇವ್ ಘೋಷಣೆ
ಮನೆಯ ಫ್ರೀಜರ್ ಒಳಗಡೆ ಹಿಮದ ಶಿವಲಿಂಗ ಮೂಡಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ದೂರದೂರುಗಳಿಂದ ಜನ ದರ್ಶನಕ್ಕಾಗಿ ಧಾವಿಸುತ್ತಿದ್ದಾರೆ. ಸಾರ್ವಜನಿಕರು ಇದನ್ನು ಸಾಕ್ಷಾತ್ ಮಹಾದೇವನ ಪವಾಡ ಎಂದೇ ನಂಬಿದ್ದಾರೆ. ಮನೆಯ ಫ್ರಿಜ್ ಬಾಗಿಲು ತೆರೆದು ಅದರ ಒಳಗೇ ಕರ್ಪೂರ ಹಚ್ಚಿ ಆರತಿ ಬೆಳಗಲಾಗುತ್ತಿದ್ದು, ಇಡೀ ಬಡಾವಣೆ ಈಗ ಹರ ಹರ ಮಹಾದೇವ್ ಮತ್ತು ಬೋಲೋ ನಾಥ್ ಎಂಬ ಜಯಘೋಷಗಳಿಂದ ಮೊಳಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲೂ ಇದರ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಲು ಮತ್ತೊಂದು ಮುಖ್ಯ ಕಾರಣವಿದೆ. ಪ್ರಸ್ತುತ ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ ಮೂಡುವ ಹಿಮದ ಶಿವಲಿಂಗವು (ಬಾಬಾ ಬರ್ಫಾನಿ) ಅವಧಿಗೂ ಮುನ್ನವೇ ಶೇಕಡಾ 90 ಕ್ಕಿಂತ ಹೆಚ್ಚು ಕರಗಿ ಹೋಗಿದೆ. “ಅಲ್ಲಿ ಲಿಂಗ ಕರಗಿರುವುದರಿಂದ, ಮಹಾದೇವನೇ ಭಕ್ತರ ಭಕ್ತಿಗೆ ಮೆಚ್ಚಿ ಇಲ್ಲಿ ಫ್ರಿಜ್ ರೂಪದಲ್ಲಿ ದರ್ಶನ ಕೊಟ್ಟಿದ್ದಾನೆ” ಎಂದು ಭಕ್ತರು ಭಾವನಾತ್ಮಕವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಅಮರನಾಥದಲ್ಲಿ ಲಿಂಗ ಕರಗಲು ಅಸಲಿ ಕಾರಣವೇನು?
ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯ ಸುತ್ತಮುತ್ತಲಿನ ಪರಿಸರ ಮತ್ತು ಗ್ಲೇಸಿಯರ್ಗಳ ತಾಪಮಾನವು ಈ ಬಾರಿ ಅಸಹಜವಾಗಿ ಏರಿಕೆಯಾಗಿದೆ. ಜಾಗತಿಕ ತಾಪಮಾನ ಏರಿಕೆಯ (Global Warming) ಪರಿಣಾಮವಾಗಿ ಹಿಮಾಲಯ ಪರ್ವತ ಶ್ರೇಣಿಗಳು ಪ್ರಪಂಚದ ಸರಾಸರಿಗಿಂತಲೂ ವೇಗವಾಗಿ ಬಿಸಿಯಾಗುತ್ತಿವೆ ಎಂದು ಹವಾಮಾನ ತಜ್ಞರು ನಿರಂತರವಾಗಿ ಎಚ್ಚರಿಸುತ್ತಲೇ ಇದ್ದಾರೆ. ಈ ತಾಪಮಾನದ ವೈಪರೀತ್ಯದಿಂದಾಗಿ 57 ದಿನಗಳ ಸುದೀರ್ಘ ಯಾತ್ರೆ ಪೂರ್ಣಗೊಳ್ಳುವ ಮೊದಲೇ ಅಲ್ಲಿನ ಹಿಮಲಿಂಗ ಬಹುತೇಕ ಕರಗಿದೆ.
ಒಂದೆಡೆ ಹಿಮಾಲಯದಲ್ಲಿ ಗ್ಲೇಸಿಯರ್ಗಳು ಕರಗುತ್ತಿರುವುದು ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿದ್ದರೆ, ಇನ್ನೊಂದೆಡೆ ಆಗ್ರಾದ ಮನೆಯೊಂದರ ಫ್ರಿಜ್ನಲ್ಲಿ ಮೂಡಿರುವ ಈ ಹಿಮದ ಆಕೃತಿ ಸದ್ಯ ಸಾರ್ವಜನಿಕರಲ್ಲಿ ಆಸ್ಥೆ ಮತ್ತು ಕುತೂಹಲದ ಕೇಂದ್ರಬಿಂದೂ ಆಗಿದೆ.

