ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವತಿಯ ತಡೆದು ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತದ ಬಳಿ ಘಟನೆ ನಡೆದಿದೆ.
ಬೆಳ್ತಂಗಡಿಯ ದಿಡುಪೆಯ ಜಲಪಾತ ನೋಡಲು ಬಂದಿದ್ದ ಯುವತಿಗೆ ಬೆದರಿಕೆ ಹಾಕಲಾಗಿದೆ. ಮಂಗಳೂರಿನಿಂದ ಬಂದಿದ್ದ ಯುವತಿಯನ್ನು ದಿಡುಪೆ ರಸ್ತೆಯಲ್ಲಿ ತಡೆದು ಜೀವ ಬೆದರಿಕೆ ಹಾಕಲಾಗಿದ್ದು, ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜುಲೈ 12ರಂದು ಮಂಗಳೂರಿನಿಂದ ತನ್ನ ಸ್ನೇಹಿತ ಫರ್ಹಾನ್ ಜೊತೆಗೆ ಯುವತಿ ಬೈಕ್ ನಲ್ಲಿ ಜಲಪಾತ ನೋಡಲು ಬಂದಿದ್ದರು. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದುಕೊಂಡು ಜಲಪಾತ ನೋಡಿ ವಾಪಸ್ ಬಂದ ಯುವತಿಯನ್ನು ಯುವಕರ ತಂಡ ತಡೆದಿದೆ. ಯುವತಿಯನ್ನು ಅವಾಚ್ಯವಾಗಿ ಸ್ಥಳೀಯರ ಗ್ಯಾಂಗ್ ನಿಂದಿಸಿದೆ. ಅನ್ಯಕೋಮಿನ ಯುವಕನ ಜೊತೆಗೆ ಯಾಕೆ ಬಂದೆ ಎಂದು ಪ್ರಶ್ನಿಸಿದೆ.
ಸ್ಥಳೀಯ ನಿವಾಸಿಗಳಾದ ರಂಜಿತ್, ಸುದರ್ಶನ್, ಪ್ರದೀಪ್, ದೀಕ್ಷಿತ್ ಸೇರಿ ಹಲವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಯುವಕನನ್ನು ಮುಂದೆ ಕಳುಹಿಸಿ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕೆಯನ್ನು ತಡೆದ ಸ್ಥಳೀಯ ಯುವಕರು ನಿಂದಿಸಿ ನಿನ್ನೊಂದಿಗೆ ಬಂದಿದ್ದ ಯುವಕನನ್ನು ಇಲ್ಲಿಗೆ ಕರೆಸು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

