ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ರಾತ್ರಿ ಪ್ರಕಟಿಸಿದೆ.
ಅಭ್ಯರ್ಥಿಗಳು KEA ವೆಬ್ ಸೈಟ್ ನಲ್ಲಿ ಬಿಟ್ಟಿರುವ ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು.
ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆ ಇದ್ದಲ್ಲಿ ಜುಲೈ 14ರಂದು ಸಂಜೆ 5ಗಂಟೆಯೊಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು.
ಜುಲೈ 9ರಂದು ಬೆಳಿಗ್ಗೆ 11 ಗಂಟೆವರೆಗೆ ದಾಖಲಿಸಿದ್ದ ಇಚ್ಛೆ/ಆಯ್ಕೆಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಯುಜಿಸಿಇಟಿ – 2026ರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಟಿಪ್ಪಣಿ
1. ಅರ್ಹ ಅಭ್ಯರ್ಥಿಗಳು 09-07-2026 ಬೆ.11.00 ರವರೆಗೆ ಆದ್ಯತಾ ಕ್ರಮದಲ್ಲಿ ನಮೂದಿಸಲಾದ ಇಚ್ಛೆ /ಆಯ್ಕೆಗಳನ್ನು ಪರಿಗಣಿಸಿ, ನಿಯಮಾನುಸಾರ UGCET 2026 ರ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಕೈಗೊಂಡು ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು 13-07-2026 ರಂದು ಪ್ರಕಟಿಸಲಾಗಿದೆ. ಫಲಿತಾಂಶ ಪರಿಶೀಲನೆಯ ನಂತರ ಅಭ್ಯರ್ಥಿಯು ತಾತ್ಕಾಲಿಕವಾಗಿ ಹಂಚಿಕೆಯಾದ ಕಾಲೇಜಿಗೆ ವರದಿ ಮಾಡುವ ಹಾಗಿಲ್ಲ.
2. ಪ್ರಕಟಿಸಲಾದ ತಾತ್ಕಾಲಿಕ ಫಲಿತಾಂಶ ಕುರಿತು ನಿರ್ದಿಷ್ಟ ಆಕ್ಷೇಪಣೆಗಳು ಇದ್ದಲ್ಲಿ (ಕಟ್‌ಆಫ್ ಪರಿಶೀಲಿಸಲಾಗಿದೆ, ಆಯ್ಕೆಗಳನ್ನು ನಮೂದಿಸಲಾಗಿದೆ ಆದರೆ ಯಾವುದೇ ಸೀಟು ಹಂಚಿಕೆಯಾಗಿಲ್ಲ) 14-07-2026 ರಂದು ಸಂಜೆ 5.00 ಗಂಟೆಯ ಮೊದಲು [email protected] ಗೆ ಆಧಾರಗಳ ಸಹಿತ ಮೇಲ್ ಮಾಡಬಹುದು.
3. ಆಯ್ಕೆಗಳನ್ನು ನಮೂದಿಸದ ಕಾರಣ ಸೀಟು ಹಂಚಿಕೆಯಾಗಿಲ್ಲ, ಅಂತಹ ಆಕ್ಷೇಪಣೆಗಳನ್ನು ಸಲ್ಲಿಸಬಾರದು. ಈ ಹಂತದಲ್ಲಿ ಆಯ್ಕೆಗಳ ಬದಲಾವಣೆಗೆ ಅನುಮತಿಸಲಾಗುವುದಿಲ್ಲ.
4. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.
5. KEA ವೆಬ್‌ಸೈಟ್‌ನಲ್ಲಿ ಸೀಟು ಹಂಚಿಕೆ ಕುರಿತು ಕಾಣಿಸಿಕೊಳ್ಳುವ ಸೂಚನೆಗಳು, ಅಧಿಸೂಚನೆಗಳು ಮತ್ತು ಪ್ರಕಟಣೆಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸದ ಕಾರಣ ಉಂಟಾಗುವ ಯಾವುದೇ ಕ್ರಮ / ಪರಿಣಾಮಗಳಿಗೆ KEA ಜವಾಬ್ದಾರವಾಗುವುದಿಲ್ಲ. ಅಭ್ಯರ್ಥಿಗಳು KEA ವೆಬ್‌ಸೈಟ್ ಗೆ ಆಗಿಂದಾಗ್ಗೆ ನವೀಕರಣಗಳಿಗಾಗಿ ಭೇಟಿ ನೀಡಲು ತಿಳಿಸಲಾಗಿದೆ.

