ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ ಭಾಗ 1’ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಲು ಸಜ್ಜಾಗುತ್ತಿದೆ. ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ದೃಶ್ಯ ವೈಭವವನ್ನು ಚೀನಾದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಚೀನಾದ ಪ್ರದರ್ಶಕರು ಮತ್ತು ವಿತರಕರೊಂದಿಗೆ ಈಗಾಗಲೇ ಮಾತುಕತೆಗಳು ನಡೆಯುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನೇತೃತ್ವದಲ್ಲಿ ನಾಲ್ಕು ದಿನಗಳ ಭಾರಿ ಪ್ರಚಾರ ಪ್ರವಾಸವನ್ನು ಯೋಜಿಸಲಾಗಿದೆ. ಸೆಪ್ಟೆಂಬರ್ 24 ರಂದು ನಡೆಯಲಿರುವ ಪಿಂಗ್ಯಾವೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರೆಸ್ ಮೀಟ್ ಮತ್ತು ಸ್ಕ್ರೀನಿಂಗ್ ಆಯೋಜಿಸಲು ನಿರ್ಧರಿಸಲಾಗಿದ್ದು, ಆ ಬಳಿಕ ಅಕ್ಟೋಬರ್ 1 ರಿಂದ ಆರಂಭವಾಗುವ ಚೀನಾದ ಪ್ರಸಿದ್ಧ ‘ಗೋಲ್ಡನ್ ವೀಕ್’ ರಜಾದಿನಗಳ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ನಗರಗಳಲ್ಲಿ ಮಲ್ಟಿ-ಸಿಟಿ ಪ್ರಚಾರ ಕಾರ್ಯಕ್ರಮ ನಡೆಯಲಿದೆ.
ಚೀನಾ ಮಾರುಕಟ್ಟೆಯು ಈ ಹಿಂದೆ ಭಾರತೀಯ ಸಿನಿಮಾಗಳಿಗೆ ಭಾರಿ ಲಾಭ ತಂದುಕೊಟ್ಟಿತ್ತು. ದಂಗಲ್, ಸೀಕ್ರೆಟ್ ಸೂಪರ್ಸ್ಟಾರ್, 3 ಈಡಿಯಟ್ಸ್, ಅಂಧಾಧುನ್ ಮತ್ತು ಬಜರಂಗಿ ಭಾಯಿಜಾನ್ ಚಿತ್ರಗಳು ಅಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ್ದವು. ವಿಶೇಷವಾಗಿ ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಚೀನಾದಲ್ಲಿ ಐತಿಹಾಸಿಕ ಕಲೆಕ್ಷನ್ ಮಾಡಿತ್ತು. ಆದರೆ ‘ಅಂಧಾಧುನ್’ ಚಿತ್ರದ ನಂತರದ ವರ್ಷಗಳಲ್ಲಿ ಯಾವುದೇ ದೊಡ್ಡ ಭಾರತೀಯ ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ‘ರಾಮಾಯಣ’ ಚಿತ್ರದ ಮೂಲಕ ಮತ್ತೊಮ್ಮೆ ಚೀನಾದಲ್ಲಿ ಭಾರತೀಯ ಸಿನಿಮಾಗಳ ಭರ್ಜರಿ ಮಾರುಕಟ್ಟೆ ಪುನರಾರಂಭವಾಗುವ ನಿರೀಕ್ಷೆ ಇದೆ.
ಇನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ರಾಮಾಯಣ ಭಾಗ 1’ ಚಿತ್ರದ ಅಧಿಕೃತ ಟ್ರೈಲರ್ ಇದೇ ಜುಲೈ 24, 2026 ರಂದು ದೆಹಲಿಯಲ್ಲಿ ನಡೆಯಲಿರುವ ಭವ್ಯ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಈ ದೀಪಾವಳಿ ಹಬ್ಬದ ಪ್ರಯುಕ್ತ ಮೊದಲ ಭಾಗ ವಿಶ್ವಾದ್ಯಂತ ತೆರೆಕಾಣಲಿದ್ದು, ಮುಂದಿನ ವರ್ಷದ ದೀಪಾವಳಿಗೆ ಚಿತ್ರದ ಎರಡನೇ ಭಾಗ ಬಿಡುಗಡೆಯಾಗಲಿದೆ.
From Bharat to the world, the Ramayana trailer premieres worldwide on 24th July, 2026. 🏹 pic.twitter.com/rphSFR99OE
— The World Of Ramayana (@WorldOfRamayana) July 11, 2026

