ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಮತ್ತು ಅಪ್ರಾಪ್ತ ವಯಸ್ಕರ ವಾಹನ ಚಾಲನೆಗೆ ಬ್ರೇಕ್ ಹಾಕಬೇಕಾದ ಉನ್ನತ ಪೊಲೀಸ್ ಅಧಿಕಾರಿಯೇ ತಾವೇ ಸ್ವತಃ ಕಾನೂನು ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ. ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು, ತಮ್ಮ ಆರೂವರೆ ವರ್ಷದ ಪುಟಾಣಿ ಮೊಮ್ಮಗಳಿಗೆ ಬ್ಯುಸಿ ಸಾರ್ವಜನಿಕ ರಸ್ತೆಯಲ್ಲೇ ಕಾರು ಚಾಲನೆ ಮಾಡಲು ಬಿಟ್ಟು ಭಾರಿ ಆಪತ್ತು ತಂದುಕೊಂಡಿದ್ದಾರೆ.
ಸಾರ್ವಜನಿಕರು ಈ ಬೇಜವಾಬ್ದಾರಿತನದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಂತೆ ಎಚ್ಚೆತ್ತ ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು (DGP) ಎಸ್‌ಐ ವಿರುದ್ಧ ಅಮಾನತು ಅಸ್ತ್ರ ಪ್ರಯೋಗಿಸಿದ್ದಾರೆ.
ರಸ್ತೆಯಲ್ಲೇ ಕಾರು ನಿಲ್ಲಿಸಿ ಸಾರ್ವಜನಿಕರ ಕ್ಲಾಸ್ !
ಶನಿವಾರ ಸಂಜೆ ಹೈದರಾಬಾದ್ ಕಮಿಷನರೇಟ್ ವ್ಯಾಪ್ತಿಯ ನರಸಿಂಗಿ ಪೊಲೀಸ್ ಠಾಣೆ ಮುಂಭಾಗದ ಗಂಧಂಗುಡ ಎಂಬ ನಿರಂತರ ವಾಹನ ಸಂಚಾರವಿರುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಪೂಜಾರಿ ತಿರುಪತಿ ಎಂಬುವವರು ತಮ್ಮ ಸ್ವಂತ ಕಾರಿನಲ್ಲಿ (TS07 GP 7450) ಆರೂವರೆ ವರ್ಷದ ಪುಟ್ಟ ಮಗುವನ್ನು ಚಾಲಕನ ಸೀಟಿನಲ್ಲಿ ಕೂರಿಸಿಕೊಂಡು ಸ್ಟೀರಿಂಗ್ ಹಸ್ತಾಂತರಿಸಿದ್ದರು.
ಕಾರನ್ನು ಪುಟ್ಟ ಬಾಲಕಿ ಓಡಿಸುತ್ತಿರುವುದನ್ನು ಗಮನಿಸಿದ ಸಹ ಪ್ರವಾಸಿಗರು ಮತ್ತು ಸಾರ್ವಜನಿಕರು ತಕ್ಷಣವೇ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. “ಒಂದು ವೇಳೆ ಅಪಘಾತ ಸಂಭವಿಸಿ ಜೀವಹಾನಿಯಾಗಿದ್ದರೆ ಯಾರು ಹೊಣೆ?” ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
‘ಇದು ಆಟೋಮ್ಯಾಟಿಕ್ ಕಾರ್’ ಎಂದ ಎಸ್‌ಐ ಸಮರ್ಥನೆ !
ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಾಗ ಎಸ್‌ಐ ತಿರುಪತಿ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ವಿಚಿತ್ರ ಸಮರ್ಥನೆ ನೀಡಲು ಮುಂದಾಗಿದ್ದಾರೆ. “ಇದು ಆಟೋಮ್ಯಾಟಿಕ್ ಕಾರು, ಗೇರ್ ಬದಲಿಸುವ ತಾಪತ್ರಯವಿಲ್ಲ. ಬ್ರೇಕ್ ಮತ್ತು ಕಂಟ್ರೋಲ್ ನನ್ನ ಕೈಯಲ್ಲೇ ಇತ್ತು,” ಎಂದು ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಜಮಾಯಿಸಿದ್ದ ಜನರು ಅವರ ಮಾತನ್ನು ಒಪ್ಪದೆ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಬಾಲಕಿ ಈತ ನನ್ನ ತಾತ ಎಂದು ಗುರುತಿಸಿದಾಗ ನೆರೆದಿದ್ದವರು ಮತ್ತಷ್ಟು ಗರಂ ಆಗಿದ್ದಾರೆ.
ವಿಡಿಯೋ ವೈರಲ್: ಬಿಎನ್‌ಎಸ್ ಹಾಗೂ ಮೋಟಾರ್ ಕಾಯ್ದೆಯಡಿ ಕೇಸ್ !
ಸ್ಥಳದಲ್ಲಿದ್ದವರು ಈ ಇಡೀ ಹೈಡ್ರಾಮಾವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸಾರ್ವಜನಿಕರಿಗೆ ಬುದ್ಧಿ ಹೇಳುವ ಪೊಲೀಸರೇ ಹೀಗೆ ಕಾನೂನು ಗಾಳಿಗೆ ತೂರಿದರೆ ಹೇಗೆ ಎಂದು ನೆಟ್ಟಿಗರು ಕಮಿಷನರ್ ಮತ್ತು ಡಿಜಿಪಿಯವರನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನರಸಿಂಗಿ ಪೊಲೀಸರು, ಆರೋಪಿ ಎಸ್‌ಐ ಪೂಜಾರಿ ತಿರುಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 125 ರ ಅಡಿಯಲ್ಲಿ ಹಾಗೂ ಮೋಟಾರ್ ವಾಹನಗಳ ಕಾಯ್ದೆಯ (MV Act) ಸೆಕ್ಷನ್ 184 ಮತ್ತು 180 ರ ಅಡಿಯಲ್ಲಿ ಅಪ್ರಾಪ್ತರಿಗೆ ವಾಹನ ನೀಡಿದ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಆರೋಪದ ಮೇಲೆ ಗಂಭೀರ ಮೊಕದ್ದಮೆ ದಾಖಲಿಸಿದ್ದಾರೆ.
ಡಿಜಿಪಿ ಆದೇಶ: ಎಸ್‌ಐ ತಕ್ಷಣ ಅಮಾನತು !
ಪೊಲೀಸ್ ಇಲಾಖೆಗೆ ಮುಖಭಂಗ ತಂದ ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿದ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್ ಅವರು, ಸೈಬರಾಬಾದ್ ಪೊಲೀಸ್ ಕಮಿಷನರ್ ಡಾ. ಎಂ. ರಮೇಶ್ ಅವರಿಗೆ ತಕ್ಷಣವೇ ಜಾರಿಗೆ ಬರುವಂತೆ ಎಸ್‌ಐ ಪೂಜಾರಿ ತಿರುಪತಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ (Suspension) ಕಡಕ್ ಆದೇಶ ನೀಡಿದ್ದಾರೆ. ಜೊತೆಗೆ ಇಲಾಖಾ ಮಟ್ಟದ ಶಿಸ್ತು ತನಿಖೆಗೆ ಆದೇಶ ಹೊರಡಿಸಲಾಗಿದ್ದು, ಕಾನೂನು ಉಲ್ಲಂಘಿಸಿದ ಅಧಿಕಾರಿಗೆ ಖಾಕಿ ಇಲಾಖೆಯೇ ಸರಿಯಾದ ಶಾಕ್ ನೀಡಿದೆ.
But—- ‘ Ma Thata SI’ attitude of the kid seems to be a bigger issue. https://t.co/wPM3oOBEv1
— @Coreena Enet Suares (@CoreenaSuares2) July 12, 2026
“>View tweet

