ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜೆಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಡಿಸೆಂಬರ್ ಒಳಗೆ ನಡೆಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ ಜಿಬಿಎ ಚುನಾವಣೆ ಮುಂದೂಡಲು ಅವಕಾಶ ಕೇಳಿದ್ದು, ಈ ವೇಳೆ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಆಗಸ್ಟ್ 31ರೊಳಗೆ ಚುನಾವಣೆ ನಡೆಸಬೇಕು. ಮತ್ತೆ ಮುಂದೂಡಿಕೆ ಕೇಳದಂತೆ ತಿಳಿಸಿತ್ತು.
ಆದರೆ ರಾಜ್ಯದಲ್ಲಿ ಎಸ್ಐಆರ್ ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅದೇ ಸಿಬ್ಬಂದಿ ಚುನಾವಣೆಗೂ ಪಾಲ್ಗೊಳ್ಳಬೇಕಾಗಿರುವುದರಿಂದ ಡಿಸೆಂಬರ್ ವರೆಗೆ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ಇನ್ನೂ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿಲ್ಲ. ಅರ್ಜಿ ವಿಚಾರಣೆಗೆ ಅಂಗೀಕರಿಸಿದಲ್ಲಿ ಮಾತ್ರ ವಾದ ಆಲಿಸುವ ಬಗ್ಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಲಾಗಿದೆ.
ಜಿಬಿಎ ವ್ಯಾಪ್ತಿಯ ಒಟ್ಟು 269 ವಾರ್ಡ್ ಗಳಿಗೆ ಸರ್ಕಾರ ಚುನಾವಣೆ ನಡೆಸಬೇಕಿದೆ. ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ನಡೆಸಲು ಡಿಸೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರ ಮನವಿ ಮಾಡಿದೆ.
ಆಗಸ್ಟ್ 31ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಜಿಬಿಎ ಚುನಾವಣೆಗೆ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದ್ದು, ಈಗಿರುವ ಸಿಬ್ಬಂದಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ನಿಖರ ಮತದಾರರ ಪಟ್ಟಿ ಇಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸರಿಯಾದ ಮತದಾರರ ಪಟ್ಟಿ ಅಗತ್ಯವಾಗಿದ್ದು, ಜಿಬಿಎ ಚುನಾವಣೆಯನ್ನು ನಡೆಸಲು ಡಿಸೆಂಬರ್ ವರೆಗೆ ಕಾಲಾವಕಾಶ ನೀಡಬೇಕೆಂದು ಸರ್ಕಾರ ಕೋರಿದೆ.

